ಬೆಂಗಳೂರು: ಈ ಹಿಂದೆ 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಂಬಾ ಅದೃಷ್ಟದ ಮನೆಯಾಗಿದ್ದ ಸರ್ಕಾರಿ ನಿವಾಸ ಕಾವೇರಿಗೆ ಅವರು ಮತ್ತೆ ಶಿಫ್ಟ್ ಆಗಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸ ಲಕ್ಕಿ ನಿವಾಸ ಅಂತಾರೇ ಜನಜನಿತವಾಗಿತ್ತು. ಆದ್ದರಿಂದ ಈಗ ಅವರು ತಂಗಿರುವ ಶಿವಾನಂದ ವೃತ್ತದ ಸರ್ಕಾರಿ ನಿವಾಸದಿಂದ ಕಾವೇರಿಗೆ ಶಿಫ್ಟ್ ಆಗಲಿದ್ದಾರೆ.

ಈ ಸಂಬಂಧ ಇಂದು ಬೆಳಗ್ಗೆಯೇ ಕಾವೇರಿ ನಿವಾಸದಲ್ಲಿ ಸಿಎಂ ಕುಟುಂಬದ ಸದಸ್ಯರಿಂದ ಪೂಜೆ ನೇರವೇರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಂದ ವಿಶೇಷ ಪೂಜೆ ಸಲ್ಲಿಸಿದರು. ಕಳೆದ 2013 ರಲ್ಲಿ ಸಿಎಂ ಆಗಿದ್ದ ಅವಧಿಯಲ್ಲಿ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಉಳಿದುಕೊಂಡಿದ್ದರು.
ಬಳಿಕ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದ ಸಿದ್ದರಾಮಯ್ಯ ಅವರು, ಅಂದು ಸಚಿವರಾಗಿದ್ದ ಕೆ.ಜೆ ಜಾರ್ಜ್ ಹೆಸರಿನಲ್ಲಿ ಹಂಚಿಕೆಯಾಗಿದ್ದ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಉಳಿದುಕೊಂಡಿದ್ದರು.

ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಾಸ್ತವ್ಯವನ್ನು ಬದಲಿಸಿದ್ದ ಸಿದ್ದರಾಮಯ್ಯ ಅವರು, ಕಾವೇರಿಯಿಂದ ಶಿವಾನಂದ ವೃತ್ತದ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು. ಇದೀಗ ಸಿಎಂ ಆದ ಬಳಿಕ ಮತ್ತೆ ಕಾವೇರಿ ನಿವಾಸಕ್ಕೆ ಅವರು ಶಿಫ್ಟ್ ಆಗುತ್ತಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅವರು ಇದೀಗ ತಮ್ಮ ವಾಸ್ತವ್ಯವನ್ನು ಬದಲಿಸಿದ ನಂತರ ಸಿದ್ದರಾಮಯ್ಯ ಅವರು ಕಾವೇರಿಗೆ ಶಿಫ್ಟ್ ಆಗುತ್ತಿದ್ದಾರೆ.




