AFTER LOK SABHA ELECTION THIS GOVT. WILL GO: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪುನರ್ ಸ್ಥಾಪನೆಗೆ ಲೋಕಸಭಾ ಫಲಿತಾಂಶ ಕಾರಣ ಆಗುತ್ತೆ: ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು : ಆಪರೇಷನ್ ಹಸ್ತ, ಆಪರೇಷನ್ ಕಮಲದ ಚರ್ಚೆ ನಡುವೆ ಮತ್ತೊಂದು ಮಹತ್ವದ ಚರ್ಚೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹುಟ್ಟುಹಾಕಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಭವಿಷ್ಯವನ್ನು ನುಡಿದಿದ್ದಾರೆ. ನಾನು ಯಾರು, ಯಾರು ಮಾತಾಡಿದ್ದಾರೋ ಅವರ ಬಗ್ಗೆ ಕಮೆಂಟ್ ಮಾಡಲ್ಲ, ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಏನೆಲ್ಲಾ ಆಗಲಿದೆ ಅನ್ನೋದನ್ನ ನೋಡೋಣ ಎಂದಿದ್ದಾರೆ.

ಮೊನ್ನೆ ವಿಧಾನಸಭೆ ಚುನಾವಣೆ ಕೂಡ ಮುಗಿದಿದೆ, ಲೋಕಸಭಾ ಚುನಾವಣೆಯನ್ನು ಎದುರು ನೋಡುತ್ತಿದ್ದೇವೆ, ಈ ಚುನಾವಣೆ ನಂತರ ಈ ಸರ್ಕಾರದ ಟೆಸ್ಟ್ ಆರಂಭವಾಗಲಿದೆ, ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಪುನರ್ ಸ್ಥಾಪನೆ ಆಗೋದಕ್ಕೆ ಈ ಫಲಿತಾಂಶ ಕಾರಣ ಆಗುತ್ತದೆ ಎಂದು ಹೇಳಿದ್ದಾರೆ.
ಒಂದೊಂದು ರೀತಿಯ ಚುನಾವಣೆ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ, ಕಳೆದ ಲೋಕಸಭಾ ಚುನಾವಣೆ ನಂತರ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಬಿದ್ದಿತ್ತು, ಅದೇ ರೀತಿ ಬರುವ ಲೋಕಸಭಾ

ಚುನಾವಣೆ ಫಲಿತಾಂಶದ ಪರಿಣಾಮ ಕೂಡ ಈ ಸರ್ಕಾರದ ಮೇಲೆ ಬೀಳಲಿದೆ, ಯಾರ ಯಾರ ಹೇಳಿಕೆ ಸತ್ಯ ಆಗುತ್ತೋ ಅಸತ್ಯ ಆಗುತ್ತೋ ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಉದಯ್ ಸ್ಟ್ಯಾಲಿನ್ ಅವರ ಮನಸ್ಥಿತಿ ಅವರ ಹೇಳಿಕೆಯಿಂದ ತೋರಿಸುತ್ತದೆ.
ತಮಿಳುನಾಡು ಸಚಿವ ಉದಯ್ ನಿಧಿ ಅವರ ಮನಸ್ಥಿತಿ ಅವರ ಹೇಳಿಕೆಯಿಂದ ತೋರಿಸುತ್ತದೆ ಎಂದು ಹೇಳಿದ ಬೊಮ್ಮಾಯಿ, ಅದನ್ನು ಜಾತಿಗೆ ಹೋಲಿಸುವ ಮಾತು ಹಿಟ್ಲರ್ ಮೈಂಡ್ ಸೆಟ್ ಆಗಿದೆ ಎಂದರು.
ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ತಾಳಿರುವ ಅವರನ್ನು ಸಚಿವನಾಗಿ ಮುಂದುವರಿಯುವ ಅರ್ಹತೆ ಇಲ್ಲ, ಅವರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಇಂಡಿಯ ಅನ್ನೋ ಒಕ್ಕೂಟ ಅಧಿಕಾರ ಹಿಡಿಯಲು ಏನೇನೋ ಮಾಡುತ್ತಿದೆ, ದೇಶದ ಏಕತೆ, ಘನತೆ ಹಾಳಾದರೂ ಇವರಿಗೆ ಚಿಂತೆ ಇಲ್ಲ, ದೇಶದ ಜನರು ಇದನ್ನೆಲ್ಲ ನೋಡುತ್ತಿದ್ದಾರೆ, ಇದೆಲ್ಲವನ್ನೂ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಬೆಂಗಳೂರಿಗೆ ನೀರಿನ ಹಾಹಾಕಾರ ಎದುರಾಗಲಿದೆ
ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಫಲವಾಗಿದೆ, ಬೆಂಗಳೂರಿನಲ್ಲಿ ಸದ್ಯದಲ್ಲೇ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ, ಸರ್ಕಾರ ಆರಂಭದಿಂದಲೇ ಇದರ ನಿರ್ವಹಣೆ ಮಾಡಬೇಕಿತ್ತು, ರೈತರಿಗೆ ನೀರು ಬಿಟ್ಟಿಲ್ಲ, ಕೆರೆಗಳಿಗೆ ನೀರು ತುಂಬಿಸಿಲ್ಲ, ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಆರೋಪಿಸಿದರು.
ಸೆಪ್ಟೆಂಬರ್ 6 ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಪಕ್ಷದ ವಲಯದಲ್ಲಿ ತೀರ್ಮಾನ ಮಾಡಿ ಹೋರಾಟ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

More News