ಉಪಚುನಾವಣೆ : ಬಿಜೆಪಿಯವರು ಕವರ್ ನಲ್ಲಿ ಹಣ ಹಂಚುವ ವಿಡಿಯೋ ಪ್ರದರ್ಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಉಪಚುನಾವಣೆ : ಹತ್ತು ಸಾವಿರದವರೆಗೆ ಬಿಜೆಪಿ ಹಣ ಹಂಚುತ್ತಿದ್ದಾರೆ ಆರೋಪ: ವಿಡಿಯೋ ಪ್ರದರ್ಶಿಸಿದ ಡಿಕೆಶಿವಕುಮಾರ್
ಬೆಂಗಳೂರು : ಸಿಂದಗಿ‌, ಹಾನಗಲ್ ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇಂದು ಮನೆ ಮನೆ ಪ್ರಚಾರ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಆಡಳಿತರೂಢ ಬಿಜೆಪಿ ಆಕ್ರಮ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿ, ಹಣ ವಿತರಿಸುತ್ತಿರುವ ವಿಡಿಯೋ ತೋರಿಸುವ ಮೂಲಕ ಬಣ್ಣ ಬಯಲು ಮಾಡಿದ್ದಾರೆ.


ಬೆಂಗಳೂರಿನಲ್ಲಿ ಇಂದು ರಾತ್ರಿ ಮೋಬೈಲ್ ನಲ್ಲಿ ಬಂದಿರುವ ವಿಡಿಯೋವನ್ನು ಬಹಿರಂಗಪಡಿಸಿದರಲ್ಲದೆ, ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಉಪ ಚುನಾವಣೆ ನಡೆಯುತ್ತಿರುವ ಮತದಾರರಿಗೆ 5 ರಿಂದ 10 ಸಾವಿರ ರೂಪಾಯಿವರೆಗೆ ಹಣ ಹಂಚಲಾಗುತ್ತಿದೆ ಎಂದು ಆರೋಪಿಸಿದರು.

ಈ ರೀತಿ ಚುನಾವಣೆ ಮಾಡಿದ್ರೇ ಜನರು ಏನು ಮಾಡ್ಬೇಕು ಅನ್ಕೋತೀರಿ, ಇದು ಭ್ರಷ್ಟ ಚುನಾವಣೆ, ಇಂತಹ ಭ್ರಷ್ಟ ಪಕ್ಷ ನಾವು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಪಾರ್ಟಿಯವರೇ ನಮಗೆ ಈ ವಿಡಿಯೋಗಳನ್ನ ಕಳುಹಿಸಿದ್ದಾರೆ, ಹಣದ ಕವರ್ ಮೇಲೆ ಕಮಲದ ಮತ್ತು ಅಭ್ಯರ್ಥಿಯ ಫೋಟೋ ಇದೆ ಎಂದು ಆರೋಪಿಸಿದರು.


ಮುಖ್ಯಮಂತ್ರಿಗಳು ಪರ್ಮನೆಂಟ್ ಆಗಿ ಹುಬ್ಬಳ್ಳಿಯಲ್ಲೇ ಇರಲಿ ಎಂದು ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ಎಲ್ಲಾ ಮಂತ್ರಿಗಳೂ ಅಲ್ಲಿಯೇ ಇದ್ದು ಇಂತಹದ್ದೇ ಕೆಲಸ ಮಾಡುತ್ತಿರಬಹುದು ಎಂದು ಗುಮಾನಿ ವ್ಯಕ್ತಪಡಿಸಿದರಲ್ಲದೆ, ಹಣದ ಮೂಲಕ ಮತ ಖರೀದಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.


ನಮ್ಮ ಸ್ನೇಹಿತರ ಮನೆ ಮೇಲೆ ಐಟಿ ದಾಳಿ : ಇಂದು ನಡೆದ ಆದಾಯ ತೆರಿಗೆ ದಾಳಿಯ ಸಂಬಂಧ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್, ನಮ್ಮ ಸ್ನೇಹಿತರ ಮನೆ ಮೇಲೆ ದಾಳಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರನಲ್ಲಿ ಎರಡು ಕಡೆ ದಾಳಿಯಾಗಿದೆ, ನಮ್ಮ ಮನೆ ಮೇಲೆ ದಾಳಿ ನಡೆದಿಲ್ಲ, ನಾನು ಎಲ್ಲದಕ್ಕೂ ಸಿದ್ದನಿದ್ದೇನೆ ಎಂದು ತಿಳಿಸಿದರು.


ಬಿಟ್ ಕಾಯಿನ್ ದೊಡ್ಡವರ ಹೆಸರು ಕೇಳಿ ಬರುತ್ತಿವೆ : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ಇದರಲ್ಲಿ ದೊಡ್ಡ ದೊಡ್ಡವರ ಹೆಸರುಗಳು ಕೇಳಿ ಬರುತ್ತಿವೆ, ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳ ಹೆಸರೂ ಇದೆ ಎಂದು ಕೇಳಿ ಬರ್ತಿದೆ ಎಂದು ಹೇಳಿದರು.

ದೊಡ್ಡವರು ಈ ಬಿಟ್ ಕಾಯಿನ್ ಪ್ರಕರಣದಲ್ಲಿ ಇರುವುದರಿಂದ ರಾಜ್ಯ ಸರ್ಕಾರ ಇದನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪ್ರಕರಣದಲ್ಲಿ ಯಾರು ಇದ್ದಾರೆ ಎನ್ನುವ ಬಗ್ಗೆ ಮಾಹಿತಿಯಿಲ್ಲ ಎಂದು ಸ್ಪಷ್ಟಪಡಿಸಿದರು.

More News