ಬೆಂಗಳೂರು: ರಿಪಬ್ಲಿಕ್ ಆಫ್ ಭಾರತ್ ಎಂದು ಪುನರ್ ನಾಮಕರಣ ಮಾಡಿದ ಕೇಂದ್ರದ ನಿರ್ಧಾರವನ್ನು ಮಾಜಿ ಸಚಿವ ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ, ಅದೇ ರೀತಿ ಭಾರತ ಎಂಬುದಕ್ಕೂ ಕಿಚ್ಚಿದೆ, ಭಾರತ ಎಂದು ಕರೆಯುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್
ವಿದ್ಯುತ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ ಸುನೀಲ್ ಕುಮಾರ್, ಅಘೋಷಿತ ಲೋಡ್ ಶೆಡ್ಡಿಂಗ್ ರಾಜ್ಯಾದ್ಯಂತ ಇದೆ, ಇಂಥಹ ಪರಿಸ್ಥಿತಿ ನಿರ್ಮಾಣ ಆಗಿರುವುದು ದುರಂತ, ಈ ಸರ್ಕಾರ ಯಾವುದೇ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ವಿದ್ಯುತ್ ಬೇಡಿಕೆಯನ್ನು ಅರ್ಥ ಮಾಡಿಕೊಂಡಿಲ್ಲ, ಉತ್ಪಾದನೆ ಕೂಡ ಕುಸಿದಿದ್ದು ಜನರ ಮೇಲೆ ಹೊರೆ ಬಿದ್ದಿದೆ, ಗ್ರಾಮೀಣ ಭಾಗದಲ್ಲಿ 2 ಅಥವಾ 3 ಗಂಟೆ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ, ಕತ್ತಲೆಯತ್ತ ಕರ್ನಾಟಕಕ್ಕೆ ಕಾಂಗ್ರೆಸ್ ಸಿದ್ದತೆ ಮಾಡಿಕೊಳ್ಳುತ್ತಿದೆ, ಅಗಸ್ಟ್ ತಿಂಗಳಲ್ಲೇ ಹೀಗಾದರೆ ಇಡೀ ರಾಜ್ಯ ಕಗ್ಗತ್ತಲೆ ಕಡೆ ಹೋಗುವುದು ನಿಶ್ಚಿತ, ಅಮಸಮರ್ಥ ನಿರ್ವಹಣೆಯಿಂದ ಕರ್ನಾಟಕ ಕಗ್ಗತ್ತಲೆಯತ್ತ ಹೋಗಿದೆ ಎಂದರು.
ಥರ್ಮಲ್ ಪ್ಲ್ಯಾಂಟ್ ಎಷ್ಟು ಉತ್ಪಾದನೆ ಆಗಬೇಕಿತ್ತೋ ಅಷ್ಟು ಮಾಡುತ್ತಿಲ್ಲ, ವಿದ್ಯುತ್ ಇಲಾಖೆಯಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಿದೆ, ಗೃಹ ಜ್ಯೋತಿ ಬಗ್ಗೆ ಜಾಹೀರಾತಲ್ಲಿ 200 ಯುನಿಟ್ ಉಚಿತ ಎನ್ನುತ್ತಿದ್ದಾರೆ, ಆದರೆ ಯಾವ ಗ್ರಾಹಕರಿಗೂ ಉಚಿತ ವಿದ್ಯುತ್ ಸಿಗುತ್ತಿಲ್ಲ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.




