NO WATER TO TAMILNADU FROM SEPTEMBER 12TH : ಸೆಪ್ಟಂಬರ್ 12 ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ : ಸುಪ್ರೀಂಕೋರ್ಟ್ ಗೆ ರಾಜ್ಯದಿಂದ ಪ್ರಮಾಣಪತ್ರ ಸಲ್ಲಿಕೆ

ನವದೆಹಲಿ : ಕರ್ನಾಟಕ ರಾಜ್ಯ ಸರ್ಕಾರವು ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕಾವೇರಿ ಮತ್ತು ಕೃಷ್ಣಾ ಜಲಾಯನ ಪ್ರದೇಶಗಳಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 12ರ ನಂತರ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದೆ.

ಅಗಸ್ಟ್ 29ರಿಂದ ಸೆಪ್ಟಂಬರ್ 11ರವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿತ್ತು. ಆ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದರ ನೀರು ಹರಿಸುವ ಪ್ರಮಾಣವನ್ನು 5 ಸಾವಿರ ಕ್ಯೂಸೆಕ್ ನಿಂದ 3 ಸಾವಿರ ಕ್ಯೂಸೆಕ್ ಇಳಿಸಬೇಕೆಂದು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ಇದುವರೆಗೂ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಬೇಕಾಗಿತ್ತು. ಆದರೆ, ಇದುವರೆಗೂ 37, 869 ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಹೆಚ್ಚುವರಿ ನೀರು ಬಿಡುಗಡೆ ಪ್ರಮಾಣವನ್ನು ಮುಂಬರುವ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಧಿಕಾರ ರಾಜ್ಯ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಕಾವೇರಿ ಮತ್ತು ಕೃಷ್ಣಾ ಕಣಿವೆಗಳಲ್ಲಿ ಗಂಭೀರ ಪ್ರಮಾಣದಲ್ಲಿ ಬರಪರಿಸ್ಥಿತಿ ಎದುರಾಗಲಿದೆ, ಇದರಿಂದ ರಾಜ್ಯ ಸರ್ಕಾರದ ಮೇಲೆ ಸಾಕಷ್ಟು ಒತ್ತಡವಿದೆ. ಪಟ್ಟಣಗಳ ಮತ್ತು ನಗರಗಳ ಜನರಿಗೆ ಕುಡಿಯುವ ನೀರು, ಬೆಳೆ ನೀರು ಹರಿಸಲು ರಾಜ್ಯಕ್ಕೆ 140 ಟಿಎಂಸಿ ಅಡಿಯಷ್ಟು ನೀರು ಬೇಕಾಗಿದೆ. ಆದ್ದರಿಂದ ಸೆಪ್ಟಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

More News