Asia Cup: ಕಮ್ ಬ್ಯಾಕ್ ಬಳಿಕ ಮೊದಲ ಏಕದಿನ ಪಂದ್ಯವನ್ನಾಡಲು ಬುಮ್ರಾ ಸಜ್ಜು: ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಯಲ್ಲಿ ರಾಹುಲ್

ಏಷ್ಯಾಕಪ್-2023ರ ಸೂಪರ್-4 ಹಂತದ ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದು, ಸೆ.10ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿವೆ.

ಈ ನಡುವೆ ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಇತ್ತೀಚಿಗೆ ತಂಡಕ್ಕೆ ಮರಳಿರುವ ಬುಮ್ರಾ, ಕಮ್ ಬ್ಯಾಕ್ ಬಳಿಕ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ತವಕದಲ್ಲಿದ್ದಾರೆ. ಹೀಗಾಗಿ ರೋಚಕ ಹಣಾಹಣಿಯಲ್ಲಿ ಜಸ್ಪ್ರೀತ್ ಬುಮ್ರಾ, ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಯಾವ ರೀತಿ ಕಡಿವಾಣ ಹಾಕುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಈ ಹಿಂದೆ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಬುಮ್ರಾ ಬೌಲಿಂಗ್ ಮಾಡಲು ಆಗಿರಲಿಲ್ಲ. ಬಳಿಕ ನೇಪಾಳ ವಿರುದ್ಧ ನಡೆದ ಪಂದ್ಯದ ವೇಳೆ ಬುಮ್ರಾ, ತಮ್ಮ ಮೊದಲ ಮಗುವಿನ ಜನನ ಹಿನ್ನೆಲೆ ಭಾರತಕ್ಕೆ ವಾಪಸ್ಸಾಗಿದ್ದರು. ಇದೀಗ ಶ್ರೀಲಂಕಾಕ್ಕೆ ಹಿಂದಿರುಗಿರುವ ಸ್ಪೀಡ್ ಸ್ಟಾರ್, ಸೂಪರ್-4ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಈಗಾಗಲೇ ಸೂಪರ್-4ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನ ಮಣಿಸಿ ಗೆಲುವಿನ ಆರಂಭ ಕಂಡಿದೆ. ಹೀಗಾಗಿ ಬಾಬರ್ ಆಜ಼ಂ ನೇತೃತ್ವದ ಪಾಕಿಸ್ತಾನ, ಜಯದ ಆತ್ಮವಿಶ್ವಾಸದಲ್ಲಿದೆ. ಆದರೆ ಟೂರ್ನಿಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಮಾತ್ರ ಪೂರ್ಣ ಪ್ರಮಾಣದ ಪಂದ್ಯವನ್ನ ಆಡಿರುವ ಭಾರತದ ಆಟಗಾರರಿಗೆ ಈವರೆಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟಗಾರರಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಎದುರಿಸುವುದು ರೋಹಿತ್ ಶರ್ಮಾ ಪಡೆಗೆ ದೊಡ್ಡ ಸವಾಲಾಗಿದೆ.

ರಾಹುಲ್ ಕಣಕ್ಕಿಳಿಯುವ ನಿರೀಕ್ಷೆ
ಒಂದೆಡೆ ಜಸ್ಪ್ರೀತ್ ಬುಮ್ರಾ, ಕಮ್ ಬ್ಯಾಕ್ ಬಳಿಕ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರೆ. ಮತ್ತೊಂದೆಡೆ ಕನ್ನಡಿಗ ಕೆಎಲ್ ರಾಹುಲ್ ಕೂಡ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗುವ ನಿರೀಕ್ಷೆ ಹೊಂದಿದ್ದಾರೆ. ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ರಾಹುಲ್, ಇದೀಗ ತಂಡವನ್ನ ಕೂಡಿಕೊಂಡಿದ್ದು, ಅಭ್ಯಾಸದಲ್ಲೂ ಸಹ ತೊಡಗಿದ್ದರು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಹುಲ್ ತಂಡದ ಪ್ಲೇಯಿಂಗ್ ಇಲವೆನ್ ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೆಚ್ಚಾಗಿದೆ

More News