ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೊಯ್ದ ವಿಧಿ ಬಹಳ ಕ್ರೂರಿ ಎಂದು ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.
ನಾವಿಬ್ಬರೂ ಒಟ್ಟಿಗೆ ವಾಕಿಂಗ್ ಮಾಡಿದ್ದೇವೆ. ಜಿಮ್ ಮಾಡಿದ್ದೇವೆ. ಚಿತ್ರರಂಗ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಶಿಸ್ತು ಬದ್ಧ ಜೀವನ, ಕಟ್ಟುನಿಟ್ಟಿನ ವ್ಯಾಯಾಮದ ಮೂಲಕ ಪುನೀತ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಶಿವಕುಮಾರ್ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
6 ತಿಂಗಳ ಮಗುವಾಗಿದ್ದಾಗಿನಿಂದಲೇ (ಪ್ರೇಮದ ಕಾಣಿಕೆ) ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನಟಿಸಿದ್ದ ಪುನೀತ್, ನಂತರ ವಸಂತಾ ಗೀತಾ, ಚಲಿಸುವ ಮೋಡಗಳು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಾಲ ನಟರಾಗಿ ಮನಗೆದ್ದಿದ್ದರು. ಬೆಟ್ಟದ ಹೂವು ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಮಾತ್ರವಲ್ಲದೇ, ತಂದೆಗೆ ತಕ್ಕ ಮಗನಂತೆ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಜನರ ಅಭಿಮಾನ ಗಳಿಸಿದ ಧ್ರುವ ನಕ್ಷತ್ರ ಪುನೀತ್ ಅವರು. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ಅನ್ಯ ಭಾಷಿಕ ಪ್ರೇಕ್ಷಕರನ್ನು ತಮ್ಮ ಅಭಿಮಾನಿಯಾಗಿ ಮಾಡಿಕೊಂಡಿದ್ದು ಪುನೀತ್ ಅವರಲ್ಲಿದ್ದ ಕಲಾ ಶಕ್ತಿಗೆ ಸಾಕ್ಷಿಯಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಸಂದೇಶ
ಕನ್ನಡ ಚಿತ್ರ ರಂಗದ ಖ್ಯಾತ ಚಿತ್ರನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿಳಿಸದ್ದಾರೆ.
ಅವರ ನಟಿಸ್ಸಿದ್ದ ಪೃಥ್ವಿ ಮತ್ತು ರಾಜಕುಮಾರ ಚಿತ್ರವನ್ನು ಅಪ್ಪು ಅವರ ಜೊತೆಯಲ್ಲೇ ನೋಡಿದ್ದೇ ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯವಾಗಿದೆ. ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ತುಂಬಲಿ ಎಂದಿದ್ದಾರೆ.
ನಳಿನ್‍ಕುಮಾರ್ ಕಟೀಲ್ ಸಂತಾಪ
“ಪವರ್ ಸ್ಟಾರ್” ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಯುವ ನಟರಾದ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ ಮತ್ತು ಪ್ರಖ್ಯಾತ ನಟರಾದ ಡಾ. ರಾಜ್‍ಕುಮಾರ್ ಅವರ ಪುತ್ರರಾದ ಪುನೀತ್ ಅವರು “ಅಪ್ಪು’ ಎಂದೇ ಖ್ಯಾತಿ ಪಡೆದಿದ್ದು ಕನ್ನಡಿಗರ ಕಣ್ಮಣಿ ಎನಿಸಿದ್ದರು. ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ. ನಾಡಿನ ಸಮಸ್ತ ಕನ್ನಡಿಗರಿಗೆ ಈ ವಿಷಯ ಆಘಾತವನ್ನು ತಂದಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರಿಂದ ಸಂತಾಪ
ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಲಾರದ ನಷ್ಟ ಎಂದಿದ್ದಾರೆ.
ಕ್ರಿಕೆಟಿಗರಿಂದ ಸಂತಾಪ
ಖ್ಯಾತ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಯುವ ನಟರ ವಿಧಿವಶದಿಂದ ಕನ್ನಡ ಚಿತ್ರರಂಗವಲ್ಲದೆ, ಸಿನೆಮಾ ಲೋಕವೇ ಬರಡಾಗಿದೆ ಎಂದಿದ್ದಾರೆ.




