Andhra Pradesh Bandh: ಆಂಧ್ರ ಬಂದ್ ಗೆ ಜನಸೇನಾ ಪಕ್ಷ ಬೆಂಬಲ: ಯುದ್ಧಕ್ಕೂ ಸಿದ್ಧ ಎಂದ ನಟ ಪವನ್ ಕಲ್ಯಾಣ್

ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪದಡಿ ಮಾಜಿ ಸಿಎಂ ಚಂದ್ರಬಾಬು ನಾಯ್ದು ಬಂಧನ ಹಿನ್ನಲೆ ಅವರ ಅಭಿಮಾನಿಗಳು ಆಂಧ್ರಪ್ರದೇಶದಲ್ಲಿ ಕರೆ ನೀಡಿರುವ ಬಂದ್ ಗೆ ನಟ ಪವನ್ ಕಲ್ಯಾಣ್ ಜನಸೇನಾ ಪಕ್ಷ ಬೆಂಬಲ ನೀಡಿದೆ.

ನನ್ನ ಕೊನೆಯುಸಿರು ಇರುವವರೆಗೂ ಜಗನ್ ವಿರುದ್ಧ ಹೋರಾಡುತ್ತೇನೆ. ಯುದ್ಧಕ್ಕೂ ಸಿದ್ಧ. ಹೀಗಾಗಿ ಕಾರ್ಯಕರ್ತರು ಶಾಂತಿಯುತವಾಗಿ ಬಂದ್ ಮಾಡಬೇಕೆಂದು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ.
ಅಲ್ಲದೇ ಜಗನ್ ನೀವು ಜೈಲಿಗೆ ಹೋದರೆ ಎಲ್ಲರೂ ಜೈಲಿಗೆ ಹೋಗಬೇಕಾ ಎಂದು ಸಹ ಪವನ್ ಕಲ್ಯಾಣ್ ಆಡಳಿತರೂಢ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಚಂದ್ರಬಾಬು ನಾಯ್ದು ಬಂಧನದ ಬಳಿಕ ಆಂಧ್ರದಲ್ಲಿನ ಬಂದ್ ಗೆ ನಟ ಪವನ್​ ಕಲ್ಯಾಣ್​ ಅವರ ಜನಸೇನಾ ಪಕ್ಷ ಮತ್ತು ಟಿಡಿಪಿ​, ಸಿಪಿಐ ಕೂಡ ಕೈಜೋಡಿಸಿವೆ. ಚಂದ್ರಬಾಬು ನಾಯ್ಡು ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
2014ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಕೆಲವು ತಿಂಗಳ ಬಳಿಕ ಚಂದ್ರಬಾಬು ನಾಯ್ಡು ನಿರುದ್ಯೋಗಿಗಳಲ್ಲಿ ಕೌಶಲ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೌಶಲಭಿವೃದ್ಧಿ ನಿಗಮ ಸ್ಥಾಪಿಸಿದರು. ಆರಂಭದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರ ಸೀಮನ್‌ ಇಂಡಿಯಾ ಕಂಪನಿಯ ಜೊತೆ ಎಂಓಯು ಮಾಡಿಕೊಂಡಿತು.

ಮಹತ್ವಾಕಾಂಕ್ಷೆಯ ಈ ಪ್ರಾಜೆಕ್ಟ್‌ನನ್ನು ಸೀಮೆನ್ಸ್‌ ಇಂಡಸ್ಟ್ರಿ ಸಾಫ್ಟ್‌ವೇರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಡಿಸೈನ್ ಟೆಕ್‌ ಸಿಸ್ಟಮ್ ಪ್ರೈವೇಟ್‌ ಲಿಮಿಟೆಡ್‌ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವುದಾಗಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದರು.
ಈ ಯೋಜನೆಯ ಒಟ್ಟು ವೆಚ್ಚ 3,356 ಕೋಟಿ ರೂಪಾಯಿ. ಈ ಪೈಕಿ ಶೇ.10ರಷ್ಟನ್ನ ರಾಜ್ಯ ಸರ್ಕಾರ ಭರಿಸಿದರೆ, ಉಳಿದ ಹಣವನ್ನು ಸೀಮೆನ್ಸ್ ಕಂಪನಿ ಬಂಡವಾಳ ಹೂಡುವುದಾಗಿ ಒಪ್ಪಂದವಾಗಿತ್ತು.

ಈ ಎಂಓಯು ಪ್ರಕಾರ 2015ರ ಜನವರಿ 19ರಂದು ಚಂದ್ರಬಾಬು ನಾಯ್ಡು ವರ್ಚುವಲಿ 17 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಉದ್ಘಾಟಿಸಿದರು.
ನಂತರ ಚಂದ್ರಬಾಬು ನಾಯ್ಡು ಸರ್ಕಾರ ಪತನವಾಗಿ, ಜಗನ್‌ ಸರ್ಕಾರ ಅಸ್ತಿತ್ವಕ್ಕೆ ಬಂತು. ಮಾರ್ಚ್‌ 2021ರಂದು ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿ ಜಗನ್‌ ಸ್ಕಿಲ್ ಡೆವಲಪ್‌ಮೆಂಟ್‌ ಯೋಜನೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರ ರೂವಾರಿಯೇ ಚಂದ್ರಬಾಬು ನಾಯ್ಡು ಅಂತ ಆರೋಪಿಸಿದರು. ಪ್ರಾಥಮಿಕ ತನಿಖೆಯ ನಂತರ, ಆಂಧ್ರಪ್ರದೇಶದ ಸಿಐಡಿ ಡಿಸೆಂಬರ್‌ 9, 2021ರಲ್ಲಿ ಎಫ್‌ಐಆರ್‌ ದಾಖಲಿಸಿತು.

ಯೋಜನೆ ಜಾರಿಯಾದ ಕೇವಲ ಮೂರೇ ತಿಂಗಳಲ್ಲಿ ಚಂದ್ರಬಾಬು ನಾಯ್ಡು ಅವರು 371 ಕೋಟಿ ರೂಪಾಯಿಯನ್ನ ಅವಸರವಾಗಿ ಬಿಡುಗಡೆ ಮಾಡಿದರು. ಆಗ ಸೀಮನ್‌ ಕಂಪನಿ ಬಂಡವಾಳ ಹೂಡಿಕೆ ಮಾಡುವ ಮುನ್ನವೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿತ್ತು ಎಂದು ಜಗನ್ ಆರೋಪಿಸಿದ್ದರು.
ಸರ್ಕಾರದಿಂದ ಬಿಡುಗಡೆಯಾದ ಹಣಕ್ಕೆ ಕಂಪನಿಗಳು ಕಂಪ್ಯೂಟರ್‌ ಸೇರಿದಂತೆ ಇತರೆ ಸಾಮಾಗ್ರಿಗಳನ್ನ ನೀಡಬೇಕಿತ್ತು. ಆದ್ರೆ, ನಕಲಿ ಬಿಲ್ ಸೃಷ್ಟಿಸಿಕೊಂಡು ಹಣ ಕೊಳ್ಳೆ ಹೊಡೆಯಲಾಗಿದೆ ಅನ್ನೋದು ಚಂದ್ರಬಾಬು ನಾಯ್ಡು ಅವರ ಮೇಲಿರುವ ಆರೋಪವಾಗಿದೆ.
ಸದ್ಯ ಈ ಪ್ರಕರಣದಲ್ಲಿ ನಾಯ್ಡು ಅವರನ್ನು ಅರೆಸ್ಟ್​ ಮಾಡಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಬಂಧನ ಖಂಡಿಸಿ ಜನಸೇನಾ ಪಕ್ಷ ಹಾಗು ಪವನ್ ಕಲ್ಯಾಣ್ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಈಗಾಗಲೇ ಜನಸೇನಾ ಪಕ್ಷ ಖಂಡಿಸಿದೆ. ಆಡಳಿತ ಪಕ್ಷವು ರಾಜ್ಯದಲ್ಲಿನ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ಸಾರ್ವಜನಿಕ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಜನಸೇನಾ ಪಕ್ಷ ಆರೋಪಿಸಿದೆ.

ಜನಪರವಾಗಿ ಮಾತನಾಡುವ ಪ್ರತಿಪಕ್ಷಗಳ ವಿರುದ್ಧ ಬಂಧನಗಳು ನಡೆಯುತ್ತಿದೆ. ವೈಎಸ್‌ಪಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದಿದೆ.
ಚಂದ್ರಬಾಬು ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿಕೆ ನೀಡಿದ್ದಾರೆ. ವಿಧಾನಸಭೆಯ ನಿರ್ಣಯ ಉಲ್ಲಂಘಿಸಿ ಚಂದ್ರಬಾಬುರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪವನ್ ಆರೋಪಿಸಿದ್ದಾರೆ.

More News