ನವದೆಹಲಿ: ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಅಂತ್ಯವಾಗಿದ್ದು, ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಮುಂದಿನ 15 ದಿನಗಳ ವರೆಗೆ ಮತ್ತೆ 5000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಆದೇಶ ಹೊರಡಿಸಿದೆ.

ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡಿನ ನೀರು ಹಂಚಿಕೆಯ ಸಂಬಂಧ ಇಂದು ಸಭೆ ನಡೆಸಿತು. ಸಭೆಯಲ್ಲಿ ಸಮಿತಿ ಅಧಿಕಾರಿಗಳು ಹಾಗೂ ಎರಡೂ ರಾಜ್ಯದ ನೀರಾವರಿ ತಜ್ಞರು, ವಕೀಲರು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಭಾಗಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಸಭೆಯಲ್ಲಿ ಇನ್ನೂ 15 ದಿನಗಳ ವರೆಗೆ ಮತ್ತೆ 5000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಕ್ಕೆ ಸೂಚನೆ
ನೀಡಿದ್ದು, ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ.

ಆಗಸ್ಟ್ 29ರಂದು ನಡೆದ CWRC ಸಭೆಯಲ್ಲಿ ಕರ್ನಾಟಕ ಸರ್ಕಾರಕ್ಕೆ 15 ದಿನಗಳ ಕಾಲ ನಿತ್ಯ 5,000 ಕ್ಯೂಸೆಕ್ ಅಂದರೆ ಒಟ್ಟು 75,000 ಕ್ಯೂಸೆಕ್ ನೀರನ್ನು ಬಿಡಬೇಕೆಂದು ಸೂಚನೆ ನೀಡಲಾಗಿತ್ತು. ಪ್ರಾಧಿಕಾರ ಸೂಚನೆಯಂತೆ ರಾಜ್ಯ ಸರ್ಕಾರ ರೈತರ ತೀವ್ರ ವಿರೋಧದ ನಡುವೆಯೂ 10 ದಿನಕ್ಕೆ ತಮಿಳುನಾಡಿಗೆ ಮಳೆ ನೀರು ಸೇರಿದಂತೆ ಕೆಆರ್‌ಎಸ್ ಡ್ಯಾಂನಿಂದ 75,000 ಕ್ಯೂಸೆಕ್ ನೀರು ಹರಿಸಿ, ಸಾಕಷ್ಟು ವಿರೋಧಕ್ಕೆ ಕಾರಣವಾಯ್ತು.
ಆದ್ರೆ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಅಲ್ಲದೇ ಕೆ ಆರ್ ಎಸ್ ಡ್ಯಾಂ ನಲ್ಲಿ ನೀರಿನ ಮಟ್ಟ ತೀವ್ರವಾಗಿ ಕ್ಷೀಣಿಸಿದೆ. ಹೀಗಾಗಿ ಇಂದಿನಿಂದ ತಮಿಳುನಾಡಿಗೆ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ ಎರಡೂ ಕಡೆ ವಾದ ಆಲಿಸಿದ ಪ್ರಾಧಿಕಾರ ಇನ್ನೂ 15 ದಿನ ನೀರು ಬಿಡುವಂತೆ ಆದೇಶ ಹೊರಡಿಸಿದೆ.




