Asia Cup: ಫೈನಲ್ ಪ್ರವೇಶಿಸಿದ ಭಾರತ: ಪ್ರಶಸ್ತಿ ಕಾಳಗದಲ್ಲಿ ರೋಹಿತ್ ಪಡೆಗೆ ಎದುರಾಳಿ ಯಾರು?

ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಪ್ರಶಸ್ತಿ ಕಾಳಗದಲ್ಲಿ ಟೀಂ ಇಂಡಿಯಾದ ಎದುರಾಳಿ ಯಾರು? ಎಂಬುದು ಕುತೂಹಲ ಮೂಡಿಸಿದೆ.

ಟೂರ್ನಿಯ ಸೂಪರ್-4 ಹಂತದಲ್ಲಿ ಗೆಲುವಿನ ಅಲೆಯಲ್ಲಿರುವ ರೋಹಿತ್ ಶರ್ಮಾ ಪಡೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಗೆದ್ದು ಫೈನಲ್‌ಗೆ ಎಂಟ್ರಿಕೊಟ್ಟಿದೆ. ಹೀಗಾಗಿ ಭರ್ಜರಿ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಇದೀಗ ಪ್ರಶಸ್ತಿ ಗೆದ್ದು ಚಾಂಪಿಯನ್ ಪಟ್ಟಕ್ಕೇರುವ ಲೆಕ್ಕಾಚಾರದಲ್ಲಿದೆ. ಆದರೆ ಸೆ.17ರಂದು ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತದ ಎದುರಾಳಿ ಯಾರಾಗುತ್ತಾರೆ? ಎಂಬ ಕುತೂಹಲ ಮಾಡಿದ್ದು, ಇದಕ್ಕಾಗಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶದ ರೇಸ್ ನಲ್ಲಿವೆ.

ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿರುವ ನಾಲ್ಕು ತಂಡಗಳಲ್ಲಿ ಬಾಂಗ್ಲಾದೇಶ ಈಗಾಗಲೇ ತನ್ನ ಎರಡು ಪಂದ್ಯಗಳಲ್ಲಿ ಸೋತು, ಫೈನಲ್ ರೇಸ್ ನಿಂದ ಹೊರಬಿದ್ದಿದೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆದ್ದಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶಕ್ಕಾಗಿ ಪೈಪೋಟಿ ನಡೆಸುತ್ತಿವೆ. ಹೀಗಾಗಿ ಸೆ.14ರಂದು ನಡೆಯಲಿರುವ ಉಭಯ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಫೈನಲ್‌ನಲ್ಲಿ ಭಾರತದ ಎದುರಾಳಿ ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಲಿದೆ. ಈ ನಡುವೆ ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ, ಸೂಪರ್-4ನ ಕಡೆಯ ಪಂದ್ಯದಲ್ಲಿ ಸೆ.15ರಂದು ಬಾಂಗ್ಲಾದೇಶ ತಂಡದ ವಿರುದ್ಧ ಹಣಾಹಣಿ ನಡೆಸಲಿದೆ.

ಮತ್ತೆ ಇಂಡೋ-ಪಾಕ್ ಕದನ?
ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈಗಾಗಲೇ ಟೂರ್ನಿಯಲ್ಲಿ ಎರಡು ಬಾರಿ ಮುಖಾಮುಖಿ ಆಗಿದ್ದು, ಲೀಗ್ ಹಂತದ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾದರೆ. ಸೂಪರ್-4 ಪಂದ್ಯದಲ್ಲಿ ಟೀಂ ಇಂಡಿಯಾ, ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಎರಡು ತಂಡಗಳು ಟೂರ್ನಿಯ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿ ಆಗುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರೀಕ್ಷೆ ಹೊಂದಿದ್ದಾರೆ. ಆದರೆ ಭಾರತದ ವಿರುದ್ಧ ಫೈನಲ್ ಪಂದ್ಯದಲ್ಲಿ ಹಣಾಹಣಿ ನಡೆಸಬೇಕಾದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಫೈನಲ್ ಪ್ರವೇಶಿಸಲು ಲಂಕಾ ಚಿತ್ತ
ಮತ್ತೊಂದೆಡೆ ಅತಿಥೇಯ ಶ್ರೀಲಂಕಾ ಕೂಡ 2023ರ ಏಷ್ಯಾಕಪ್ ಟೂರ್ನಿಯ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಲಂಕಾ ಪಡೆಯ ಫೈನಲ್ ಪ್ರವೇಶದ ಕನಸು ನನಸಾಗಲಿದೆ.

*ಮಳೆ ಬಂದರೆ ಲಂಕಾಗೆ ಚಾನ್ಸ್ *

ಸೂಪರ್-4ನ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿ ಆಗಲಿವೆ. ಎರಡು ತಂಡಗಳಿಗೂ ಈ ಪಂದ್ಯ ಸೆಮಿಫೈನಲ್ ಪಂದ್ಯವಾಗಿದ್ದು, ಫೈನಲ್ ಪ್ರವೇಶಿಸಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಆದರೆ ಒಂದೊಮ್ಮೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಅಂಕ ಪಟ್ಟಿಯಲ್ಲಿ ರನ್ ರೇಟ್ ಆಧಾರದಲ್ಲಿ 2ನೇ ಸ್ಥಾನದಲ್ಲಿರುವ ಶ್ರೀಲಂಕಾ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.

ಪ್ರಶಸ್ತಿ ಮೇಲೆ ಭಾರತದ ಕಣ್ಣು
ಒಂದೆಡೆ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದರೆ. ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ಮಾತ್ರ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ತಯಾರಿ ಆರಂಭಿಸಿದೆ. ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಅತ್ಯಂತ ಬಲಿಷ್ಠವಾಗಿದ್ದು, ಮುಂಬರುವ ಏಕದಿನ ವಿಶ್ವಕಪ್ ಆರಂಭದ ಹೊಸ್ತಿಲಲ್ಲಿ ಏಷ್ಯಾಕಪ್ ಗೆದ್ದು, ಹೊಸ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್ ಟೂರ್ನಿಗೆ ಎಂಟ್ರಿಕೊಡಲು ಭಾರತ ಫೈನಲ್ ಪಂದ್ಯವನ್ನ ಎದುರು ನೋಡುತ್ತಿದೆ.

More News