ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಸಿಸಿಬಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸೋಪಿನ ನೊರೆ ಬಳಸಿ ಮೂರ್ಛೆ ರೋಗದ ನಾಟಕವಾಡಿರುವ ಶಂಕೆ ವ್ಯಕ್ತವಾಗಿದೆ.
ಸೆ. ೧೫ ರಂದು ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಚೈತ್ರಾ ಕರೆದುಕೊಂಡು ಬರಲಾಗಿತ್ತು.
ಸಿಸಿಬಿ ಕಚೇರಿ ಆಗಮಿಸಿದ್ದ ಚೈತ್ರಾ ಶೌಚಾಲಯಕ್ಕೆ ತೆರಳಿದ್ದಾಗ ಮೂರ್ಛೆ ಹೋಗಿದ್ದರು. ಆಕೆಯ ಬಾಯಲ್ಲಿ ನೊರೆ ಬರಲು ಕಾರಣವೇನು? ಒಂದು ವೇಳೆ ಸೋಪಿನ ನೀರು ಕುಡಿದಿದ್ದರೆ, ಆಕೆಗೆ ಸೋಪು ನೀಡಿದವ್ಯಾರು ಎಂಬ ಪ್ರಶ್ನೆ ಎದುರಾಗಿದೆ.
ಸದ್ಯ ಚೈತ್ರಾಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಸಮಸ್ಯೆ ಇಲ್ಲದಿರುವ ಬಗ್ಗೆ ವೈದ್ಯರೇ ಮಾಹಿತಿ ನೀಡಿದ್ದಾರೆ.
ಇದರಿಂದ ಚೈತ್ರಾ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮೂರ್ಛೆ ನಾಟಕ ಆಡಿರುವುದು ಸ್ಪಷ್ಟವಾಗಿದೆ.
ಇನ್ನೊಂದೆಡೆ ವಿಚಾರಣೆಗೆ ಸ್ಪಂದಿಸದೆ ದಿನಕ್ಕೊಂದು ನಾಟಕ ಮಾಡುತ್ತಿರುವ ಈಕೆ ವಂಚನೆ ಮಾಡಿರುವ ಕುರಿತು ಅನುಮಾನವೂ ಬಲವಾಗುತ್ತಿದೆ. ಒಟ್ಟಾರೆ ಹೋರಾಟಗಾರ್ತಿ ಎಂದು ಬಿಂಬಿಸಿಕೊಂಡಿರುವ ಚೈತ್ರಾ ಹೈಡ್ರಾಮಕ್ಕೆ ಪೊಲೀಸರೇ ಬೆಸ್ತುಬಿದ್ದಿದ್ದಾರೆ.

ಇತ್ತ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಹಾಲಶ್ರೀ ಸ್ವಾಮೀಜಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹಾಲಶ್ರೀ ಮನೆ ಮತ್ತು ಮಠದ ಸಿಸಿಟಿವಿ ಡಿವಿಆರ್‌ನ್ನು ವಶಕ್ಕೆ ಪಡೆದಿರುವ ಸಿಸಿಬಿ, ಆರೋಪಿಯ ಸಂಬಂಧಿಕರ ಮನೆಗಳಲ್ಲೂ ಹುಡುಕಾಟ ನಡೆಸಿದ್ದಾರೆ.
ಸೆ.೧೯ ಕ್ಕೆ ಅರ್ಜಿ ವಿಚಾರಣೆ:
ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ 3ನೇ ಆರೋಪಿ ಅಭಿನವ ಹಾಲಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸ್ವಾಮೀಜಿ ಪರ ವಕೀಲ ಅರುಣ್ ಶ್ಯಾಮ್ ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಬೆಂಗಳೂರಿನ ಸಿಸಿಹೆಚ್ 57 ಕೋರ್ಟ್ ಮುಂದೂಡಿದೆ.
ಅಲ್ಲದೇ ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.
ಇನ್ನೊಂದೆಡೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಸ್ವಾಮೀಜಿ ಹಾಲಶ್ರೀಗೆ ನಿರೀಕ್ಷಣಾ ಜಾಮೀನು ನೀಡದಂತೆ ಉದ್ಯಮಿ ಗೋವಿಂದಬಾಬು ಪೂಜಾರಿ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.




