Women Reservation Bill: ಮಹಿಳಾ ಮೀಸಲಾತಿ ಬಿಲ್; ರಾಜ್ಯಸಭೆಗೆ ಅನ್ವಯ ಇಲ್ಲ!

ನವದೆಹಲಿ: ಬಹು ವರ್ಷಗಳಿಂದ ಎದುರು ನೋಡುತ್ತಿದ್ದ ಮಹಿಳಾ ಮೀಸಲಾತಿ ಬಿಲ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಆದರೆ, ಈ ಮೀಸಲಾತಿ ಕೇವಲ ಲೋಕಸಭೆ ಹಾಗು ವಿಧಾನಸಭೆಯಲ್ಲಿ ಮಾತ್ರ ಅನ್ವಯವಾಗಲಿದೆ.

ಇಂದು ಲೋಕಸಭೆಯಲ್ಲಿ ‘ನಾರಿ ಶಕ್ತಿ ವಂದನ ಅಧಿನಿಯಮ’ ಮಹಿಳಾ ಮೀಸಲಾತಿ ಮಸೂದೆ ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಮಂಡನೆ ಮಾಡಿದರು. ಸಂಸತ್ತಿನ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಮೊದಲ ದಿನದ ವಿಶೇಷ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಿದ್ದು, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುತ್ತದೆ.

ಈ ಮಸೂದೆಯು ಹೆಚ್ಚಿನ ಮಹಿಳೆಯರು ಸಂಸತ್ತು ಮತ್ತು ವಿಧಾನಸಭೆಗಳ ಸದಸ್ಯರಾಗುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಆದರೆ ರಾಜ್ಯಸಭೆ ಅಥವಾ ವಿಧಾನ ಪರಿಷತ್ತುಗಳಲ್ಲಿ ಈ ಮೀಸಲಾತಿ ಇರುವುದಿಲ್ಲ.
ಈ ಮಸೂದೆಯು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಮೀಸಲಾದ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ ಸೇರಿದಂತೆ ಹಲವು ಇತರೆ ಅಂಶಗಳನ್ನು ಹೊಂದಿದೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಮಹಿಳೆಯರು ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.

ಸದ್ಯ ಲೋಕಸಭೆಯ 543 ಸದಸ್ಯರ ಪೈಕಿ ಮಹಿಳೆಯ ಪಾಲು ಶೇ. 15 ರಷ್ಟಿದೆ. ರಾಜ್ಯಸಭೆಗೆ ಸಂಬಂಧಿಸಿದಂತೆ ಇದು ಕೇವಲ 14 ರಷ್ಟು ಮಾತ್ರವಿದೆ. ಈ ಮಸೂದೆ ಕಾನೂನಾಗಿ ರೂಪುಗೊಂಡರೆ ಮಹಿಳಾ ಸಂಸದರ ಸಂಖ್ಯೆ 82ರಿಂದ 181ಕ್ಕೆ ಏರಿಕೆಯಾಗಲಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾಲದಲ್ಲಿ ಮಹಿಳಾ ಮೀಸಲಾತಿ ವಿಚಾರ ಮುನ್ನೆಲೆಗೆ ಬಂದಿತ್ತು. 1989ರಲ್ಲಿ ರಾಜೀವ್ ಗಾಂಧಿ ಈ ವಿಚಾರದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಸೂದೆಯು ಸುಮಾರು 27 ವರ್ಷಗಳಿಂದ ಬಾಕಿ ಉಳಿದಿತ್ತು. ಇದೀಗ ಸಂಸತ್ತಿನಲ್ಲಿ ಈ ಬಿಲ್ ಮಂಡನೆಯಾಗಿದ್ದು, ಮಹಿಳೆಯರಿಗೆ ಬಲ ಬಂದಂತಾಗಿದೆ.

More News