Let’s Go To Jail For Drinking Water: ಕುಡಿಯುವ ನೀರಿಗಾಗಿ ಜೈಲಿಗೆ ಹೋಗೋಣ, ನಿಮ್ಮೊಂದಿಗೆ ನಾವಿದ್ದೇವೆ: ರಾಜ್ಯ ಸರ್ಕಾರಕ್ಕೆ ಮು.ಚಂದ್ರು ಕರೆ

ಬೆಂಗಳೂರು: ನಮ್ಮಲ್ಲಿ ಬರಗಾಲವಿದೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ? ಆದೇಶ ಪಾಲನೆ ಸಾಧ್ಯವಿಲ್ಲ ಎನ್ನೋಣ. ಇದಕ್ಕಾಗಿ ಜೈಲಿಗೆ ಹೋದರೂ ರಾಜ್ಯದ ಹಿತಕ್ಕಾಗಿ ಹೋದಂತಾಗುತ್ತದೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ, ಆಮ್ ಆದ್ಮಿ ಪಕ್ಷದಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಖಾಲಿ ಬಿಂದಿಗೆ, ಖಾಲಿ ಬಕೆಟ್ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕಾವೇರಿ ನೀರಿನ ಸಮಸ್ಯೆ ಹಲವು ದಶಕಗಳಿಂದ ಇದೆ. ಈ ಸಮಸ್ಯೆಗೆ ಸರ್ಕಾರದ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ. ರಾಜ್ಯಕ್ಕೆ ನೀರಿಲ್ಲ ತಮಿಳುನಾಡಿಗೆ ಬಿಡಲು ಹೇಗೆ ಸಾಧ್ಯ?. ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ. ಮುಂದೇ ಏನೆ ಬಂದರೂ ಎದುರಿಸಲಿ, ನಾವೂ ಜೊತೆಗೆ ಇರುತ್ತೇವೆ ಎಂದರು.

ತಮಿಳುನಾಡು ಕೆಳಗಿರುವ ರಾಜ್ಯವಾಗಿರುವುದರಿಂದ ಸಹಜವಾಗಿ ಹೆಚ್ಚುವರಿ ನೀರು ಸೇರುತ್ತದೆ. ಸಿಪಿಎಸ್‌ ನೀರು ಅಂದರೆ ಇಂಗಿದ ನೀರು ಕೂಡ ಅಲ್ಲಿಗೆ ಹೋಗುತ್ತದೆ. ಅವರು ಒಂದು ಬೆಳೆಗೆ ಬಳಸುವ ನೀರನ್ನು ನಮ್ಮ ರೈತರು ಮೂರು ಬೆಳೆಗೆ ಬಳಸಬಹುದು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದರೆ ಕುಡಿಯುವ ನೀರಿನ ಸಮಸ್ಯೆಗೆ ಒಂದು ಹಂತದ ಪರಿಹಾರ ಕಂಡುಕೊಳ್ಳಬಹುದು. ಕಾವೇರಿ ವಿಚಾರದಲ್ಲಿ ಮೂರು ಪಕ್ಷಗಳು ಜನರ ಹಿತವನ್ನು ಮರೆತಂತೆ ವರ್ತಿಸುತ್ತಿವೆ. ಕಾವೇರಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಸಾಹಿತಿಗಳು, ಚಲನಚಿತ್ರ ನಟರು, ಗಣ್ಯರು, ಬೆಂಗಳೂರು ನಿವಾಸಿಗಳು ಕೂಡ ಕಾವೇರಿ ನೀರಿನ ಹೋರಾಟಕ್ಕೆ ಕೈಜೋಡಿಸಬೇಕು. ಕಾವೇರಿ ಇಲ್ಲದಿದ್ದರೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಜನ ಈಗಲೇ ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

ಡಿಕೆ ಶಿವಕುಮಾರ್ ನಿದ್ದೆ ಮಾಡುತ್ತಿದ್ದಾರೆ

ಬೆಂಗಳೂರಿಗೆ ನೀರು ಬೇಕು. ಹೀಗಾಗಿ, ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಡಿಕೆ ಶಿವಕುಮಾರ್ ಇಂದು ಮಲಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಒಪ್ಪಂದ ಮಾಡಿಕೊಂಡಿದ್ದು, ಮತಬ್ಯಾಂಕ್‌ಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರದ ರಾಜಕಾರಣಿಗಳು ರೈತರಿಗೆ ನೀರು ಬಿಡಿಸಿಕೊಂಡಿದ್ದಾರೆ. ಆದರೆ, ನಮ್ಮ ರಾಜ್ಯದ ರೈತರಿಗೆ ಇರಲಿ, ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ತಮಿಳುನಾಡಿನ ರಾಜಕಾರಣಿಗಳನ್ನು ನೋಡಿ ಕಲಿಯಬೇಕು. ಕಾಂಗ್ರೆಸ್‌ನ ಭ್ರಷ್ಟ ರಾಜಕಾರಣಕ್ಕೆ ರಾಜ್ಯದ ಜನರನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಖಾಲಿ ಬಕೆಟ್, ಖಾಲಿ ಬಿಂದಿಗೆ ಸಿಗಲಿದೆ. ಅದಕ್ಕಾಗಿಯೇ ಇಂದು ಈ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರು, ಬೆಂಗಳೂರು ಸಂಸದರು ಧ್ವನಿ ಎತ್ತಲಿ

ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಚುನಾವಣೆಗೆ ಮುನ್ನ ಬೆಂಗಳೂರು ನಗರಕ್ಕೆ ಕುಡಿಯುವ ನೀರು, ಮೇಕೆದಾಟು ಯೋಜನೆ ಬೇಕು ಎಂದು ಹೋರಾಟ ಮಾಡಿದ ಡಿಕೆ ಶಿವಕುಮಾರ್ ಇಂದು ನೀರಾವರಿ ಸಚಿವರಾಗಿದ್ದಾರೆ. ಬೆಂಗಳೂರು ಉಸ್ತುವಾರಿ ಕೂಡ ಅವರದ್ದೇ ಆಗಿದೆ. ಆದರೆ, ನಮಗೇ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕೂಡ ರಾಜಕೀಯ ಕಾರಣಗಳಿಗಾಗಿ ತಮಿಳುನಾಡಿಗೆ ನೀರು ಹರಿಸುತ್ತಿವೆ. ರಾಜ್ಯಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರಂತಹವರು ಕೂಡ ಈ ವಿಚಾರದಲ್ಲಿ ಮಾತನಾಡುತ್ತಿಲ್ಲ ಎಂದರು.

ಸಭೆಯಲ್ಲಿ ಎಎಪಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಉಪಾಧ್ಯಕ್ಷರಾದ ಮೋಹನ್ ದಾಸರಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ, ಮಾಧ್ಯಮ ಉಸ್ತುವಾರಿಗಳಾದ ಜಗದೀಶ್ ವಿ ಸದಂ ಮತ್ತು ಅನಿಲ್ ನಾಚಪ್ಪ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾವ್, ಕಾರ್ಯದರ್ಶಿಯಾದ ಅಶೋಕ್ ಮೃತ್ಯುಂಜಯ, ಎಎಪಿ ಯುವ ಘಟಕದ ಅಧ್ಯಕ್ಷ ಉಮೇಶ್ ಬಾಬು ಪಿಳ್ಳೇಗೌಡ, ಜಗದೀಶ್ ಚಂದ್ರ, ವಿಶ್ವನಾಥ್, ಮಹಾಲಕ್ಷ್ಮಿ, ಫರೀದ್, ಅಡ್ನಾನ್, ಗುರುಮೂರ್ತಿ, ಮತ್ತಿತರ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.

More News

You cannot copy content of this page