ಬೆಂಗಳೂರು: ಕಾವೇರಿ ವಿಚಾರದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ. ಕಾಂಗ್ರೆಸ್ಸಿನವರು ಜನರಿಗೆ ಮೋಸ ಮಾಡುತ್ತಿರುವುದನ್ನು ಜನರ ಮುಂದಿಡಲಾಗುವುದು ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಟ್ರಿಬ್ಯೂನಲ್‍ನಲ್ಲಿ ಕಾಟಾಚಾರಕ್ಕೆ, ಬೂಟಾಟಿಕೆಗಾಗಿ ವಾದ ಮಂಡಿಸಿದ್ದಾರೆ. ಇದೇರೀತಿ ಆದರೆ ಕರ್ನಾಟಕ ಹತ್ತಿ ಉರಿದೀತು. ರಾಜ್ಯದಲ್ಲಿ ಗೊಂದಲ, ಗಲಾಟೆ ಆದರೆ, ಈ ಸರಕಾರವೇ ನೇರ ಕಾರಣ ಎಂದು ಎಚ್ಚರಿಸಿದರು. ಮೇಲ್ಮನವಿ, ಕೇಂದ್ರಕ್ಕೆ ನಿಯೋಗದ ವಿಚಾರದ ಸಂದರ್ಭದ ಆಯ್ಕೆಯಲ್ಲೂ ಸರಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಫಾಲೋ ಸ್ಟಾಲಿನ್ ಎಂಬ ಸ್ಥಿತಿ ರಾಜ್ಯ ಸರಕಾರದ್ದು. ನಿಮಗೆ ಮೇಲ್ಮನವಿ ಸಲ್ಲಿಸಲು ಯೋಗ್ಯತೆ ಇಲ್ಲವೇ? ಎಂದು ಕೇಳಿದರು. 3 ತಿಂಗಳು ಆಡಳಿತದಲ್ಲಿ ಸನ್ಮಾನ- ಸಮಾರಂಭವೇ ನಡೆದಿದೆ. ನ್ಯಾಯಾಂಗದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿದರು.
ಈಗಿನ ಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಸಿಗುವುದು ಕಷ್ಟ. ಇವರಿಗೆ ಆ ಪ್ರಜ್ಞೆಯೇ ಇಲ್ಲ. ಇವರಿಗೆ ಸಂಸತ್ತಿನ ಚುನಾವಣೆಯಲ್ಲಿ ಸ್ಟಾಲಿನ್ ಅವರ ಸಹಕಾರ ಬೇಕಿದೆ. ಕರ್ನಾಟಕದ ಒಳಿತಿಗಾಗಿ ಸ್ಟಾಲಿನ್ ಜೊತೆ ಮಾತುಕತೆ, ವಾದ ವಿವಾದ ಮಾಡಬೇಕಿತ್ತು ಎಂದು ಆಗ್ರಹಿಸಿದರು.
ಸಿಎಂ, ಡಿಸಿಎಂ ಅವರು ಸ್ಟಾಲಿನ್ ವಿರುದ್ಧ ಇವರು ಒಂದಾದರೂ ಹೇಳಿಕೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು. ಇದು ಪಕ್ಕಾ ಒಳ ಒಪ್ಪಂದ ಎಂದು ಟೀಕಿಸಿದರು. ಕಾವೇರಿ ಜನರ ಬಗ್ಗೆ ಕಳಕಳಿ, ಪ್ರೀತಿ ಇದ್ದರೆ ಸ್ಟಾಲಿನ್‍ರನ್ನು ಎದುರು ಹಾಕಿಕೊಳ್ಳಬೇಕಿತ್ತು ಎಂದು ನುಡಿದರು. ಅವರಿಗೆ ಛೀಮಾರಿ ಹಾಕಬೇಕಿತ್ತು ಎಂದರು. ನೀರಾವರಿ ತಜ್ಞರನ್ನು ಭೇಟಿ ಮಾಡಬೇಕಿತ್ತು; ನಿವೃತ್ತ ಐಎಎಸ್ ಅಧಿಕಾರಿಗಳನ್ನು ಕೇಳಬೇಕಿತ್ತು ಎಂದು ತಿಳಿಸಿದರು.

ಸ್ಟಾಲಿನ್ ನಮ್ಮ ಬಂಧು, ಅಣ್ಣ ಎಂಬ ಚಿಂತನೆಯೇ ನಮ್ಮ ರಾಜ್ಯದ ವಿಫಲತೆಗೆ ಕಾರಣ ಎಂದು ಟೀಕಿಸಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕದ ಸರಕಾರ, ಅದರಲ್ಲೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡನ್ನು ಸೋನಿಯಾ ಗಾಂಧಿ ಪರವಾಗಿ ಓಲೈಸಲು, ಸೋನಿಯಾ ಗಾಂಧಿಯವರ ಚಿತಾವಣೆಯಿಂದ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಮತ್ತು ಬೆಂಗಳೂರಿನ ಕುಡಿಯುವ ನೀರಿಗಾಗಿ ಅವಲಂಬಿತ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಆಕ್ಷೇಪಿಸಿದರು. ಬೆಲೆ ಏರಿಕೆ, ಶುಲ್ಕಗಳ ಹೆಚ್ಚಳವನ್ನು ಅವರು ಖಂಡಿಸಿದರು.




