ಬೆಂಗಳೂರು : ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಒಂದು ಹತ್ತು ದಿನಗಳಿಂದ ಖಾಲಿ ಉಳಿದಿದ್ದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯನ್ನಾಗಿ ಯತೀಶ್ ಎನ್ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ.
ಈ ಹಿಂದೆ ಡಾ. ಸುಮನ್ ಡಿ ಪನ್ನೇಕಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಸರ್ಕಾರ ಆದೇಶ ಹೊರಡಿಸಿ ಅವರಿಗೆ ಅಧಿಕಾರ ಸ್ವೀಕರಿಸುವುದು ಬೇಡ ಎಂದು ಮೌಖಿಕ ಆದೇಶ ನೀಡಿದ್ದರಿಂದ ಅವರು ಅಧಿಕಾರ ಸ್ವೀಕರಿಸಿರಲಿಲ್ಲ ಎಂದು ಪೊಲೀಸ್ ವಲಯದಲ್ಲಿ ಮಾತುಗಳು ಕೇಳಿಬಂದಿದ್ದವು.
ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯ ಕರ್ತವ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಅವರನ್ನು ಅಕ್ಟೋಬರ್ 20 ರಂದು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿತ್ತು. ಇವರ ಜಾಗಕ್ಕೆ ಪನ್ನೇಕಾರ್ ಅವರನ್ನು ವರ್ಗಾಯಿಸಲಾಗಿತ್ತು. ಪುರುಷ ಅಧಿಕಾರಿಯೇ ಬೇಕು ಎಂದು ಅಲ್ಲಿಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಾಯ ಹೇರಿತ್ತು. ಈ ಲಾಬಿಗೆ ಮಣಿದ ರಾಜ್ಯ ಸರ್ಕಾರ ಯತೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇಶಾ ಪಂತ್ ಅವರನ್ನು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ. ಡಾ. ಸುಮನ್ ಡಿ ಪನ್ನೇಕಾರ್ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವ ಪ್ರಕಾಶ್ ದೇವರಾಜು ಅವರನ್ನು ಗದಗ್ ಜಿಲ್ಲೆಗೆ, ಡಾ. ಸಿಮಿ ಮರಿಯಮ್ ಜಾರ್ಜ್ ಅವರನ್ನು ಮೈಸೂರಿನಲ್ಲಿಯ ಪೊಲೀಸ್ ಅಕಾಡೆಮಿ ಡೆಪ್ಯುಟಿ ನಿರ್ದೇಶಕರಾಗಿ ವರ್ಗಾವಣೆ ಮಾಡಿರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.




