ಬೆಂಗಳೂರು: ನಿನ್ನೆ ರಾಜ್ಯಸಭೆ ತಡರಾತ್ರಿಯವರೆಗೂ ಮುಂದುವರೆದ ಹಿನ್ನಲೆ ಇಂದು ಅಮಿತ್ ಶಾ ಜೊತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಭೆ ನಡೆಸುವ ಸಾಧ್ಯತೆ ಇದೆ.
ಮೈತ್ರಿ ವಿಚಾರವಾಗಿ ಚರ್ಚೆ ನಡೆಸಲು ನಿನ್ನೆ ಇಬ್ಬರು ನಾಯಕರ ಭೇಟಿಗೆ ಸಮಯಾವಕಾಶ ಸಿಗಲಿಲ್ಲ. ಆದ್ರೆ ಬಿಜೆಪಿ ದೂತರಾಗಿ ದೇವೇಗೌಡರ ನಿವಾಸಕ್ಕೆ ಬಂದ ಗೋವಾ ಸಿಎಂ ಪ್ರಮೋದ್ ಸಾವಂತ್ ಮೂರು ಕ್ಷೇತ್ರಗಳ ಪ್ರಸ್ತಾಪ ಹೊತ್ತು ತಂದಿದ್ದಾರೆ ಎನ್ನಲಾಗಿದೆ.
ಅಮಿತ್ ಜೊತೆ ಸಭೆ ಆಗುವ ಮುನ್ನ ಸ್ಥಾನಗಳ ಸಂಖ್ಯೆ ಖಚಿತ ಪಡಿಸಿಕೊಂಡು ಬನ್ನಿ ಎಂಬ ಸಂದೇಶ ಹೊತ್ತು ತಂದಿದ್ದ ಗೋವಾ ಸಿಎಂ ಸಾವಂತ್, ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳ ಪ್ರಸ್ತಾಪ ಮುಂದಿಟ್ಟು ತೆರಳಿದ್ದಾರೆ.
ಜೆಡಿಎಸ್ ಪಕ್ಷದ ವರಿಷ್ಟರಿಂದ ಹೆಚ್ಚು ಕಮ್ಮಿ ಒಪ್ಪಿಗೆ ಸಿಗುವ ಸಾಧ್ಯತೆ ಹೆಚ್ಚು ಇದ್ದು, ಇಂದು ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಘೋಷಣೆ ಮಾಡುವ ಸಾಧ್ಯತೆ ಇದೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಲೋಕಸಭಾ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಮಹತ್ವ ಚರ್ಚೆ ನಡೆಸಿದ್ದಾರೆ. ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಇಚ್ಛಿಸಿರುವ 15 ನಾಯಕರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಇನ್ನು ಇದೇ ವೇಳೆ ಮೈತ್ರಿಗೆ ಪೆಟ್ಟು ನೀಡಲು ಆಪರೇಶನ್ ಹಸ್ತಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡ್ತಿದೆ.




