ಬೆಂಗಳೂರು : ಕಾವೇರಿ ನೀರು ವಿಚಾರವಾಗಿ ನಾಳೆ ಮಂಡ್ಯ ಬಂದ್ ಗೆ ನಾನಾ ಸಂಘಟನೆಗಳು ಕರೆ ನೀಡಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಾರದು ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದು ಅವರ ಹಕ್ಕು, ಅದರ ಬಗ್ಗೆ ನಮ್ಮದು ತಕರಾರಿಲ್ಲ, ನೀರು ಬಿಡಬಾರದು ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಲು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಬಹುದು ಎಂದರು.
ಆದರೆ, ಯಾವುದೇ ರೀತಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದಾಗಲಿ, ಜನ ಸಾಮಾನ್ಯರಿಗೆ ತೊಂದರೆ ಮಾಡುವುದಾಗಲಿ, ಕಾನೂನು ಬಾಹಿರವಾಗಿ ಚಟುವಟಿಕೆಗಳು ಮಾಡಬಾರದು ಎಂದು ನಾನು ಮವನಿ ಮಾಡುತ್ತೇನೆ ಎಂದರು.

ಒಂದು ವೇಳೆ ಆ ರೀತಿಯ ಘಟನೆಗಳು ಆದ ಸಂದರ್ಭದಲ್ಲಿ ತಡೆಯಲು ಪೊಲೀಸ್ ಸಿದ್ದರಾಗಿದ್ದಾರೆ, ಈಗಾಗಲೇ ನಾವು ಕೆ ಆರ್ ಎಸ್, ಮಂಡ್ಯ ಜಿಲ್ಲೆ, ಪ್ರತಿಭಟನೆ ನಡೆಯುವ ಕಡೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದು ಪರಮೇಶ್ವರ್ ವಿವರಿಸಿದರು.
ಮಂಡ್ಯದಲ್ಲಿ ಈಗಾಗಲೇ ಆರ್ ಎಎಫ್ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ, ಪದ್ದತಿ ಪ್ರಕಾರ ನಿಯೋಜನೆ ಮಾಡಿದ್ದೇವೆ ಎಂದರು.
ಕ್ಯಾಬಿನೆಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ
ಕಾವೇರಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯಬಹುದು ಎಂದು ತಿಳಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅದಲ್ಲದೆ, ಇನ್ನಿತರ ಚರ್ಚೆ ಆಗಬಹುದು ಎಂದುಕೊಂಡಿದ್ದೇನೆ ಎಂದರು, ಬಂಗಾರಪ್ಪರವರು ಸಿಎಂ ಆಗಿದ್ದಾಗ ಸುಗ್ರೀವಾಜ್ಜೆ ಜಾರಿ ಮಾಡಿದ್ದರಲ್ಲ , ಆರೀತಿ ಏನಾದರೂ ಆಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೋಡೋಣ ಸಿಎಂ, ಡಿಸಿಎಂ ದೆಹಲಿಗೆ ಹೋಗಿ ಬಂದಿದ್ದಾರೆ, ಕ್ಯಾಬಿನೆಟ್ ನಲ್ಲಿ ಮಾಹಿತಿ ನೀಡುತ್ತಾರೆ ಎಂದರು.

ಕೆ ಆರ್ ಎಸ್ ನಲ್ಲಿ ಕೇವಲ 20.56 ಟಿಎಂಸಿ ನೀರು ಇದೆ, ಒಳ ಹರಿವು 5 ಸಾವಿರ ಕ್ಯೂಸೆಕ್ ಇದೆ, ನೀರಿನ ಮಟ್ಟ ಹೆಚ್ಚುತ್ತಿಲ್ಲ, ನಮ್ಮಲ್ಲಿ ನೀರಿಲ್ಲ ಅಂತ ಮನವರಿಕೆ ಮಾಡಿಕೊಡಲಾಗಿದೆ, ಆದ್ರೂ ಸಹ ಸುಪ್ರೀಂಕೋರ್ಟ್ CWMA ಆದೇಶ ಪಾಲಿಸಿ ಎಂದು ಹೇಳಿದೆ, ನೀರು ಬಿಟ್ಟು ಬನ್ನಿ ಅಂತ ಹೇಳಿದ್ದಾರೆ, ಈ ಬಗ್ಗೆ ಸಂಪುಟದಲ್ಲಿ ತೀರ್ಮಾನ ಮಾಡಬಹುದು ಎಂದರು.
ಮಂಡ್ಯ ಬಂದ್ ಗೆ ಬಿಜೆಪಿ ಬೆಂಬಲ ವಿಚಾರ
ಮಂಡ್ಯ ಬಂದ್ ಗೆ ಬಿಜೆಪಿ ಬೆಂಬಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೆಂಬಲ ನೀಡಲಿ, ಆದರೆ, ರಾಜಕೀಯ ಮಾಡಬಾರದು, ರಾಜಕೀಯ ಮಾಡಬಾರದ್ದು ಅಂತ ನಾನು ಮನವಿ ಮಾಡಿಕೊಳ್ತೀನಿ ಎಂದರು.
ಬಿಜೆಪಿ ಸಹ ವಿವಾದದಲ್ಲಿ ಭಾಗಿಗಳೇ ಆಗಿದ್ದವರು, ಆದ್ದರಿಂದ ಅವರಿಗೂ ಜವಾಬ್ದಾರಿ ಇದೆ, ಇದರಲ್ಲಿ ರಾಜಕೀಯ ಮಾಡೋದರಲ್ಲಿ ಅರ್ಥವಿಲ್ಲ, ರಾಜಕೀಯ ಬೇರೆ ರೀತಿಯಲ್ಲಿ ಬಿಜೆಪಿಯವರು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ, ಎಲ್ಲ ರೀತಿಯಲ್ಲಿಯೂ ಕ್ರಮ ತೆಗೆದುಕೊಂಡಿದ್ದೀವಿ, ಸರ್ವ ಪಕ್ಷ ಸಭೆಯಲ್ಲಿ ಎಲ್ಲ ವಿವರಣೆ ನೀಡಿದ್ದೇವೆ, ನೀರು ಬಿಡುವ ಮೊದಲು ಸರ್ವ ಪಕ್ಷ ಸಭೆ ಕರೆಯಲಾಗಿತ್ತು, ಅಮೇಲೆ ಎರಡನೇ ಸರ್ವ ಪಕ್ಷ ಸಭೆ ಕರೆದಿದ್ದು, ಎಲ್ಲ ಒಪ್ಪಿಕೊಂಡು ನಿಮ್ಮ ಜೊತೆಗೆ ಇರ್ತೀವಿ, ಸರ್ಕಾರ ಎನೇ ನಿರ್ಧಾರ ತೆಗೆದುಕೊಂಡರು ಸರ್ಕಾರದ ಜೊತೆ ಇರ್ತೀವಿ ಅಂತ ಹೇಳಿದ್ದರು ಎಂದರು.




