Siddaramaiah Should Resign: ಮತದಾರರಿಗೆ ಆಮಿಷವೊಡ್ಡಿ ಗೆದ್ದ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಎನ್.ರವಿಕುಮಾರ್

ಬೆಂಗಳೂರು: ಮತದಾರರಿಗೆ ಆಮಿಷವೊಡ್ಡಿ ಗೆದ್ದಿರುವ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ಬಿಜೆಪಿ ಆಗ್ರಹಿಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ರಾಜ್ಯ ಚುನಾವಣಾಧಿಕಾರಿಗೆ ಇಂದು ಮನವಿಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜೀನಾಮೆ ನೀಡುವಂತೆ ನಿರ್ದೇಶಿಸಲು ಚುನಾವಣಾಧಿಕಾರಿಯನ್ನು ಕೋರಲಾಗಿದೆ ಎಂದರು.
ಮತದಾರರಿಗೆ ಆಸೆ, ಆಮಿಷ, ಅಭಿಲಾಷೆ, ಒತ್ತಡ ವಿಧಿಸಬಾರದೆಂದು ಕಾನೂನಿದೆ. ಆದರೆ, ಬಟ್ಟೆ ತೊಳೆಯುವ ಮತ್ತು ಇಸ್ತ್ರಿ ಹಾಕುವ ಮಡಿವಾಳ ಸಮುದಾಯಕ್ಕೆ ಇಸ್ತ್ರಿ ಪೆಟ್ಟಿಗೆ ಮತ್ತು ಮನೆಮನೆಗೆ ಕುಕ್ಕರ್, ಹಣ ಹಂಚಿದ ಬಗ್ಗೆ ಸಿದ್ದರಾಮಯ್ಯನವರ ಸುಪುತ್ರ, ಮಾಜಿ ಶಾಸಕ ಯತೀಂದ್ರ ಅವರು ಭಾಷಣದಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ತುಣುಕು, ಸುದ್ದಿ ನಾಡಿನಾದ್ಯಂತ ಪಸರಿಸಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯನವರು ನೈತಿಕತೆ ಕುರಿತು, ಡಾ. ಅಂಬೇಡ್ಕರರ ಸಂವಿಧಾನದ ಬಗ್ಗೆ ಬಹಳ ಮಾತನಾಡುತ್ತಾರೆ. ಅದೇ ಸಂವಿಧಾನ, ಅದೇ ಚುನಾವಣೆ ನೀತಿಸಂಹಿತೆ ಪ್ರಕಾರ ಸಿದ್ದರಾಮಯ್ಯನವರು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಪರಿಣಾಮವಾಗಿ ಅವರು ಗೆದ್ದಿದ್ದಾಗಿ ಅವರ ಮಗನೇ ಹೇಳಿದ್ದಾರೆ. ಸಿದ್ದರಾಮಯ್ಯನವರೂ ಈ ಸಭೆಯಲ್ಲಿದ್ದರು ಎಂದು ತಿಳಿಸಿದರು.
ಜೆಡಿಎಸ್ ಎನ್‍ಡಿಎ ಭಾಗವಾಗಿರುವುದರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಆನೆಯ ಬಲ ಬಂದಂತಾಗಿದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಈ ಮೈತ್ರಿಕೂಟ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಮೂರೇ ತಿಂಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬೆಲೆ ಏರಿಕೆಯಿಂದ ಜನರು ಶಾಪ ಹಾಕುವಂತಾಗಿದೆ. ಗ್ಯಾರಂಟಿಗಳನ್ನು ಮನೆಮನೆಗೆ ಮುಟ್ಟಿಸದೆ ಇರುವುದು, ಕುಡಿಯುವ ನೀರಿಲ್ಲದಿದ್ದರೂ ಕಾವೇರಿ ನೀರನ್ನು ತಮಿಳುನಾಡಿನ ಹೊಲಗಳಿಗೆ ಹರಿಸುತ್ತಿರುವುದು, ಬರ ನಿರ್ವಹಣೆಯಲ್ಲಿ ವೈಫಲ್ಯ, ಮೇವಿಲ್ಲ, ನೀರಿಲ್ಲ, ಕರೆಂಟಿಲ್ಲ, ಒಂದು ಕಿಮೀ ರಸ್ತೆ ಮಾಡಿಲ್ಲ ಎಂಬುದು ರಾಜ್ಯದ ಪರಿಸ್ಥಿತಿಯಾಗಿದೆ. ಇದು ನಮ್ಮ ಗೆಲುವಿಗೆ ಪೂರಕ ಎಂದರು.
ಮೈತ್ರಿ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿಯವರು ಇವತ್ತು ದೆಹಲಿಯಲ್ಲಿ ನಮ್ಮ ಮುಖಂಡರನ್ನು ಭೇಟಿ ಮಾಡಿ ಎನ್‍ಡಿಎಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು. ದೇಶದ ಸುಭದ್ರತೆಗಾಗಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಜೆಡಿಎಸ್ ನಮ್ಮ ಜೊತೆ ಬಂದಿರುವುದು ಬಹಳ ಸಂತಸದ ಸಂಗತಿ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರೂ ಮನವಿಪತ್ರ ಸಲ್ಲಿಸುವ ಈ ನಿಯೋಗದಲ್ಲಿದ್ದರು.

More News