ರಾಜ್ಯ ಕಾಂಗ್ರೆಸ್ ನಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಯ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೊಸ ಡಿಸಿಎಂ ಬಾಂಬ್ ಸಿಡಿಸಿದ್ದಾರೆ.
ಕೆಎನ್ ರಾಜಣ್ಣ ಸಿಡಿಸಿದ ಡಿಸಿಎಂ ಬಾಂಬ್ ಶಬ್ಧಕ್ಕೆ ಬಸವರಾಜ್ ರಾಯರೆಡ್ಡಿ ಸಾಥ್ ನೀಡಿದ್ದಾರೆ. ಹೆಚ್ಚುವರಿ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೂರಲ್ಲ ಬದಲಿಗೆ 6 ಉಪ ಮುಖ್ಯಮಂತ್ರಿಗಳ ಸ್ಥಾನಗಳನ್ನ ಸೃಷ್ಠಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಒತ್ತಾಯಿಸಿದ್ದಾರೆ.
ಹೆಚ್ಚುವರಿ ಡಿಸಿಎಂ ಚರ್ಚೆ ಪಕ್ಷದಲ್ಲಿ ನಡೆಯುತ್ತಿದ್ಯಲ್ಲಾ ನಿಮ್ಮ ಅಭಿಪ್ರಾಯ ಏನು..!? ಎಂಬ ಪ್ರಶ್ನೆಗೆ ದೆಹಲಿಯಲ್ಲಿ ಮಾತನಾಡಿದ ಅವರು, ಮೂರು ಡಿಸಿಎಂ ಸ್ಥಾನಗಳ ಬಗ್ಗೆ ರಾಜಣ್ಣ, ಜಿ.ಪರಮೇಶ್ವರ್ ಮಾತನಾಡಿದ್ದಾರೆ, ಅವರ ಅಭಿಪ್ರಾಯಕ್ಕೆ ನನ್ನ ಬೆಂಬಲ ಇದೆ. ಆದರೆ ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿವೆ. ಹೀಗಾಗೀ ಮುಸ್ಲಿಂ, ಎಸ್ಸಿ-ಎಸ್ಟಿ, ಲಿಂಗಾಯತ ಸೇರಿದಂತೆ ಮಹಿಳೆಗೂ ಒಂದೊಂದು ಡಿಸಿಎಂ ಹುದ್ದೆ ನೀಡಬೇಕು ಎಂದರು.

ಮುಂದುವರೆದು ಮಾತನಾಡಿದ ಅವರು, ಡಿಸಿಎಂ ಹುದ್ದೆಗಳ ಸೃಷ್ಠಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಜಾತಿವಾರು ಪ್ರಾದೇಶಿಕವಾರು ಪ್ರಾತಿನಿಧ್ಯ ನೀಡಬೇಕು. ಇದರಿಂದ ಲೋಕಸಭೆ ಚುನಾವಣೆಗೆ ಹೆಚ್ಚು ಅನುಕೂಲವಾಗಲಿದೆ. ಡಿ.ಕೆ ಶಿವಕುಮಾರ್ ಪಕ್ಷ ಕಟ್ಟಿದ್ದಾರೆ, ಅವರನ್ನು ಪ್ರಿನ್ಸಿಪಲ್ ಡಿಸಿಎಂ ಅಥವಾ ಸೀನಿಯರ್ ಡಿಸಿಎಂ ಮಾಡಲಿ. ಇದನ್ನೆಲ್ಲಾ ನಾವು ಸಲಹೆ ನೀಡುತ್ತಿರೋದು. ಸಲಹೆ ನೀಡುವುದು ತಪ್ಪಲ್ಲ. ಪಕ್ಷದ ತಿರ್ಮಾನಕ್ಕೆ ನಾವು ಬದ್ಧ, ಪಕ್ಷ ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೈಕಮಾಂಡ್ ಅಂಗಳಕ್ಕೆ ಚಂಡು ಎಸೆದಿದ್ದಾರೆ.




