Karnataka Film Chamber President: ಎನ್.ಎಮ್ ಸುರೇಶ್ ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಪಟ್ಟ

ಬೆಂಗಳೂರು: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್.ಎಮ್.ಸುರೇಶ್ ಆಯ್ಕೆಯಾಗಿದ್ದಾರೆ. ಇಂದು ನಡೆದ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಸುರೇಶ್ ಗೆಲುವು ಸಾಧಿಸಿದ್ದಾರೆ.

ಬೆಂಗಳೂರಿನ ಗುರುರಾಜ್ ಕಲ್ಯಾಣ್ ಮಂಟಪದಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆಯಿತು. ವಾಣಿಜ್ಯ ಮಂಡಳಿಯ 1,599 ಸದಸ್ಯರ ಪೈಕಿ 967 ಸದಸ್ಯರು ಮತದಾನ ಮಾಡಿದ್ದು, 337 ಮತಗಳನ್ನ ಪಡೆದು ಎನ್ ಎಂ ಸುರೇಶ್ ಅಧ್ಯಕ್ಷ ಪಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ 307 ವೋಟ್ ನಿಂದ ಗೆಲುವು ಸಾಧಿಸಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್.ಜಿ, ಪ್ರದರ್ಶಕರ ವಲಯದಿಂದ ನರಸಿಂಹುಲು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಗೌರವ ಕಾರ್ಯದರ್ಶಿ ನಿರ್ಮಾಪಕ ವಲಯ ಭಾ.ಮ.ಗಿರೀಶ್, ವಿತರಕರ ವಲಯದಿಂದ ಕರಿಸುಬ್ಬು, ಪ್ರದರ್ಶಕರ ವಲಯದಿಂದ ಸುಂದರ ರಾಜು ಗೆಲುವು ಸಾಧಿಸಿದ್ದಾರೆ. ಜಯಸಿಂಹ‌ ಮುಸೂರಿ ಖಜಾಂಚಿಯಾಗಿ‌ ಆಯ್ಕೆಯಾಗಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನವನ್ನು ಸಿನಿಮಾ ವಿತರಕರ ವಲಯಕ್ಕೆ ಮೀಸಲಿಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ  ಶಿಲ್ಪಾ ಶ್ರೀನಿವಾಸ್, ಎನ್‌ ಎಂ ಸುರೇಶ್, ಎ. ಗಣೇಶ್ ಹಾಗೂ ಮಾರ್ಸ್ ಸುರೇಶ್ ನಡುವೆ ಹಣಾಹಣಿ ನಡೆಯಿತು.

ಇವತ್ತಿನ ಚುನಾವಣೆಯಲ್ಲಿ ಹಿರಿಯ ನಟ ದ್ವಾರಕೀಶ್, ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್,ನಟ ನಿರ್ಮಾಪಕ ಬಿ.ಸಿ.ಪಾಟೀಲ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ನಟ ಅಜಯ್ ರಾವ್, ಸಾಹಿತಿ ನಾಗೇಂದ್ರ ಪ್ರಸಾದ್ , ನಟ ಮೋಹನ್ ಸೇರಿದ‌ಂತೆ ಹಲವರು ತಮ್ಮ ಹಕ್ಕು ಚಲಾಯಿಸಿದ್ರು. ಜೊತೆಗೆ ಸ್ಯಾಂಡಲ್ ವುಡ್ನ ಘಟಾನುಘಟಿಗಳ ಗೈರಾಗಿದ್ದರು.

More News