ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ತಮಿಳು ನಾಡಿಗೆ ನೀರು ಬಿಡದಂತೆ ಒತ್ತಾಯಿಸಿ
ಮಂಗಳವಾರ ಬೆಂಗಳೂರು ಬಂದ್‌ಗೆ ಅನೇಕ ಸಂಘಟನೆಗಳು ಕರೆ ನೀಡಿದ್ದು, ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆ ಆಗದಂತೆ ನೋಡಿಕೊಳ್ಳಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ನಾನು ಈಗಾಗಲೇ ಅಪೀಲ್ ಮಾಡಿದ್ದೇನೆ. ಮತ್ತೊಂದು ಬಾರಿ ಅಪೀಲು ಮಾಡ್ತೇನೆ. ನೀವು ಪ್ರತಿಭಟನೆ ಮಾಡೋಕೆ ನಮ್ಮ ತಕರಾರು ಇಲ್ಲ. ಅದು ನಿಮ್ಮ ಹಕ್ಕು. ನೀವು ಪ್ರತಿಭಟನೆ ಮಾಡ್ತೀರಿ. ಅದು ರಾಜ್ಯದ ಹಿತಾಸಕ್ತಿಯಿಂದ ಮಾಡತಕ್ಕದು. ಆದ್ರೆ ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿ ಆಗಲಿ, ವೈಯಕ್ತಿಕವಾಗಿ ಜನರಿಗೆ ತೊಂದರೆ ಆಗಬಾರದು . ಕಾನೂನುಬಾಹಿರವಾಗಿರೋ ಯಾವುದೇ ಚಟುವಟಿಕೆ ಆಗದಂತೆ ನೋಡಿಕೊಳ್ಳಿ. ಆದ್ರೂ ಕೂಡ ಬೆಂಗಳೂರಿನಲ್ಲಿ ಮಾಡೋ ಪ್ರತಿಭಟನೆ ಸ್ವಲ್ಪ ಎಲ್ಲರಿಗೂ ಟೆನ್ಷನ್ ಇರುತ್ತೆ.
ಜನಸಮುದಾಯ ಓಡಾಡೋದಕ್ಕೆ ತೊಂದರೆ ಆಗುತ್ತೆ.
ಇದೆಲ್ಲವನ್ನೂ ಸಹ ಗಮನಕ್ಕೆ ತೆಗೆದುಕೊಂಡಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನೆಲ್ಲಾ ಸಭೆ ಮಾಡಿಕೊಂಡು ನಮ್ಮ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.
ನಿನ್ನೆ ಕೂಡ ಮಂಡ್ಯ ಮದ್ದೂರಿನಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಅವರು ಕೂಡ ಯಾವುದೇ ಅಹಿತಕರ ಘಟನೆ ಆಗದಂತೆ ಪ್ರತಿಭಟನೆ ಮಾಡಿದ್ದಾರೆ ಎಂದು ತಿಳಿಸಿದರು.
ಬಂದ್ ಆದ್ರೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳತ್ತೆ ಅನ್ನೋ ವಿಚಾರದ ಕುರಿತು ಮಾಹಿತಿ ನೀಡಿದ ಅವರು,
ಬಂದ್ ಆದರೇನೆ ನಮ್ಮ ಸಮಸ್ಯೆ ಬಗೆಹರಿಯುತ್ತೆ ಅಂತ ಭಾವಿಸಿಲ್ಲ. ಆದ್ರೆ ಇದೊಂದು ಸಂದೇಶ. ಇದು ನಮಗೆ ನೀರಿಲ್ಲದೇ ಇರೋ ಕಾಲ. ನೀರು ಬಿಡಿ ಅಂತ ಹೇಳ್ತಾ ಇದ್ದೀರಿ. ಸಿಡಬ್ಯೂಎಂಎ ಅವರಿಗೆ ಒಂದು ಸಂದೇಶ ಕೊಟ್ಟ ಹಾಗೆ ಆಗುತ್ತೆ. ಈ ತರ ಅನಿಸಿಕೆ ಅವರಿಗೆ ಇರಬಹುದು.
ನಾವು ಸರ್ಕಾರ ಏನು ಕೆಲಸ ಮಾಡಬೇಕು, ಯಾವ ರೀತಿ ಮನವೊಲಿಸಬೇಕು ಎಂಬ ಕೆಲಸ ಮಾಡ್ತಾ ಇದ್ದೇವೆ. ಆದ್ರೆ ಕಾನೂನು ಯಾವ ಕಡೆ ಹೋಗುತ್ತೆ ಎಂದು ಹೇಳೋಕ್ಕೆ ಬರೋದಿಲ್ಲ. ಬಂದ್ ಮಾಡ್ಬೇಡಿ ಎಂದು ನಾನು ಹೇಳ್ತಿಲ್ಲ. ಸರ್ಕಾರದ ಪರವಾಗಿ ಬಂದ್ ಮಾಡಬೇಡಿ ಎಂದು ಹೇಳ್ತಿದ್ದೇನೆ. ಜನರಿಗೆ ತೊಂದರೆ ಆಗುತ್ತೆ. ಇದ್ರಿಂದ ನಾವೇನೂ ಸಾಧನೆ ಮಾಡೋದಿಲ್ಲ ಅಂತ ಮನವಿ ಮಾಡ್ತಾ ಇದ್ದೇನೆ. ಉಳಿದಿದ್ದು ಅವರ ವಿವೇಚನೆಗೆ ಬಿಟ್ಟಿರೋದು
ಎಂದು ಹೇಳಿದರು.
ಬಂದ್ ಗೆ ಬಿಜೆಪಿ ಜೆಡಿಎಸ್ ಬೆಂಬಲ ವಿಚಾರದ ಕುರಿತು ಮಾತನಾಡಿದ ಅವರು, ಅದು ಸ್ವಾಭಾವಿಕ. ಅವ್ರು ಒಕ್ಕೂಟ ಮಾಡಿಕೊಂಡಿದ್ದಾರೆ. ಹಾಗಾಗಿ ಒಂದು ಪ್ರದರ್ಶನ ಮಾಡಬೇಕಲ್ವಾ. ಬಹುಶಃ ರಾಜ್ಯದ ಹಿತಾಸಕ್ತಿ ಅವರಿಗೂ ಇದೆ ಅಲ್ವಾ.? ಸರ್ಕಾರ ಹೇಳದೆ ಕೇಳದೆ ನೀರು ಬಿಟ್ಟಿದೆ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಉತ್ತರಿಸಿದ ಅವರು, ಮೊದಲ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲವೂ ಹೇಳಲಾಗಿದೆ. ಮುಚ್ಚಿಟು ಏನೂ ವ್ಯವಹಾರ ಮಾಡಿಲ್ಲ. ಅವರು ಕೂಡ ನಮ್ಮ ಲೀಗಲ್ ಟೀಂನ ಪ್ರಶ್ನೆ ಮಾಡಿದ್ದಾರೆ. ನಾವು ಎಲ್ಲವೂ ತಿಳಿಸಿದ್ದೇವೆ. ರಾಜ್ಯದ ಹಿತಾಸಕ್ತಿ ಕಾಪಾಡೋಕೆ ನಾವು ಹೇಗೆ ಬದ್ದರಾಗಿದ್ದೇವೋ ಅದಕ್ಕೆ ಅವರು ಸಹಕರಿಸಬೇಕು ಎಂದು ಮನವಿ ಮಾಡಿದರು

೨೮ ಕ್ಷೇತ್ರಗಳಿಗೆ ಸಚಿವರನ್ನ ವೀಕ್ಷಕರಾಗಿ ನೇಮಕ ಮಾಡಿರೋ ವಿಚಾರದ ಕುರಿತು ಮಾತನಾಡಿದ ಅವರು,
ನಮಗೆ ಸ್ಥಳೀಯ ನಾಯಕರ ಸಭೆ ಕರೆದು ಅವರ ಮನಸ್ಥಿತಿ ಹೇಗಿದೆ..? ಅವರ ಸಲಹೆ ಏನಿರುತ್ತೆ..? ಯಾರನ್ನ ಅಭ್ಯರ್ಥಿ ಮಾಡಿದ್ರೆ ಗೆಲ್ಲಬಹುದು. ಪಕ್ಷದ ಸಂಘಟನೆ ಯಾವ ರೀತಿ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲಾ ಒಬೊಬ್ಬ ಮಂತ್ರಿಗಳನ್ನ ಹಾಕಿದ್ದಾರೆ. ನಮ್ಮ ಜಿಲ್ಲೆ ನಮ್ಮ ಜವಾಬ್ದಾರಿ. ಅದರ ಜೊತೆಗೆ ಬೇರೆ ಲೋಕಸಭಾ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನ ಮಾಡ್ತೇವೆ ಎಂದು ತಿಳಿಸಿದರು. ಮೈತ್ರಿಯಿಂದಾಗಿಯೇ ಬೇಗ ವೀಕ್ಷಕರ ನೇಮಕ ಆಯ್ತಾ ಎಂಬ ವಿಚಾರದ ಕುರಿತು ಮಾತನಾಡಿದ ಅವರು,
ಅದಕ್ಕೂ ನಮ್ಮಗೂ ಸಂಬಂಧ ಇಲ್ಲ. ನಮ್ಮ ಕೆಲಸ ನಾವು ಮಾಡ್ತೇವೆ. ನಮ್ಮ ಗುರಿ ೨೦ ಸೀಟ್ ಗೆಲ್ಲೋದು ಎಂದು ತಿಳಿಸಿದರು.




