ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಕೊಂಡು ಬಿಜೆಪಿ ಮತ್ತು ಜೆಡಿಎಸ್ ಮಹತ್ವದ ಹೆಜ್ಞೆ ಇಟ್ಟಿವೆ. ಜೆಡಿಎಸ್ ಎನ್ ಡಿ ಎ ಮೈತ್ರಿಕೂಟವನ್ನು ಸೇರುವುದರ ಮೂಲಕ ಹೊಸ ಪಯಣ ಆರಂಭಿಸುತ್ತಿದೆ. ಈ ಮಧ್ಯೆ ಜೆಡಿಎಸ್ ಪಕ್ಷಕ್ಕೆ ಸಂಕಷ್ಟ ಎದುರಾಗಿದ್ದು, ಇದನ್ನು ಕುಮಾರಸ್ವಾಮಿ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಎನ್ ಡಿ ಎ ಮೈತ್ರಿ ಕೂಟ ಸೇರುವ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಅವರನ್ನು ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯ.ಕ್ಷ ಜೆ ಪಿ ನಡ್ಡಾ ಅವರನ್ನೊಳಗೊಂಡ ಸಭೆಗಾಗಲಿ, ಮಾತುಕತೆಗಾಗಲಿ ಕರೆದುಕೊಂಡು ಹೇಗಲಿಲ್ಲ. ಬದಲಾಗಿ, ಪುತ್ರ ನಿಖಿಲ್ ಕುಮಾರ್ ಸ್ವಾಮಿ ಅವರನ್ನು ಕುಮಾರಸ್ವಾಮಿ ಕರೆದುಕೊಂಡು ಹೋಗಿರುವುದು ಅನೇಕ ನಾಯಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಈ ನಡೆ ಜೆಡಿಎಸ್ ಅನೇಕ ಮುಸ್ಲಿಂ ನಾಯಕರನ್ನು ಕೆರಳಿಸಿದ್ದು, ನಿನ್ನೆಯಿಂದ ಅವರು ಅನೇಕ ಸಭೆಗಳನ್ನು ನಡೆಸುತ್ತಿದ್ದಾರೆ. ನಿನ್ನೆ ಬೆಂಗಳೂರು ನಗರದ ಕೆ ಕೆ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಹೆಚ್ಚಿನ ಮುಖಂಡರು ಜೆಡಿಎಸ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.

ಜೆಡಿಎಸ್ ಕಾರ್ಯಾಧ್ಯಕ್ಷ ಎನ್ ಎಂ ನಬಿ ಹಾಗೂ ಇತರ ಮುಖಂಡರಾದ ಮೋಹಿದ್ ಅಲ್ತಾಫ್, ನಾಸೀನ್ ಉಸ್ತಾದ್, ವಕ್ತಾರ ನೂರ್ ಅಹಮ್ಮದ್ ಸೇರದಂತೆ ರಾಜ್ಯದ ಅನೇಕ ಭಾಗಗಳಿಂದ ಮುಸ್ಲಿಂ ಮುಖಂಡರು ಸಭೆ ಸೇರಿ, ಜೆಡಿಎಸ್ ಮುಖಂಡರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಡೆ ಸಾಕಷ್ಟು ನೋವು ತಂದಿದೆ. ನಾವು ಪಕ್ಷ ಬಿಡದೇ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ ಸಚಿವ ಜಮೀರ್ ಅಹಮದ್ ಖಾನ್, ಜೆಡಿಎಸ್ ಪಕ್ಷದ ಮುಖಂಡ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮುಸ್ಲಿಂರ ಬೆಂಬಲದಿಂದ ಜೆಡಿಎಸ್ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲದಿದ್ದರೆ ಪಕ್ಷ ನಾಲ್ಕೂ ಸ್ಥಾನವನ್ನು ಗೆಲ್ಲುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಮುಸ್ಲಿಂ ಮತದಾರರಿಂದ ಗೆದ್ದಿದ್ದಾರೆ. ಅವರಿಲ್ಲದೇ ಇದ್ದರೆ ಅವರು ಸೋಲಿನ ರುಚಿ ಅನುಭವಿಸುತ್ತಿದ್ದರು ಎಂದಿದ್ದಾರೆ.




