IND v AUS: ಏಕದಿನ ಕ್ರಿಕೆಟ್‌ನಲ್ಲಿ ಧೋನಿ ದಾಖಲೆ ಮೇಲೆ ಕಣ್ಣಿಟ್ಟಿರುವ ಶುಭ್ಮನ್ ಗಿಲ್

“ಟೀಂ ಇಂಡಿಯಾದ ಬ್ಯಾಟಿಂಗ್ ರಾಜಕುಮಾರ” ಶುಭ್ಮನ್ ಗಿಲ್ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇದೀಗ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವತ್ತ‌ ದಾಪುಗಾಲಿಟ್ಟಿದ್ದಾರೆ.

ಪ್ರಸ್ತುತ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂ.2 ಸ್ಥಾನದಲ್ಲಿರುವ ಗಿಲ್, ಅಗ್ರಸ್ಥಾನಕ್ಕೇರಲು ಕೇವಲ 43 ಪಾಯಿಂಟ್ಸ್ ಗಳ ಅಗತ್ಯವಿದೆ. ಈ ನಡುವೆ ಶುಭ್ಮನ್ ಗಿಲ್, ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಏಕದಿನ ಕ್ರಿಕೆಟ್‌ನ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ. ಭಾರತ ಕ್ರಿಕೆಟ್‌ನ ಯಶಸ್ವಿ ಕ್ಯಾಪ್ಟನ್ ಆಗಿದ್ದ ಧೋನಿ, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ನಂ.1 ಬ್ಯಾಟರ್ ಆಗಿದ್ದ ದಾಖಲೆ ಹೊಂದಿದ್ದಾರೆ.

ತಮ್ಮ ಚಾಣಾಕ್ಷ ನಾಯಕತ್ವದ ಜೊತೆಗೆ ಸ್ಪೋಟಕ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿದ್ದ ಧೋನಿ, ಕೇವಲ 38 ಏಕದಿನ ಇನ್ನಿಂಗ್ಸ್‌ಗಳಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದರು. ಸದ್ಯ 35 ಏಕದಿನ ಪಂದ್ಯಗಳನ್ನ ಆಡಿರುವ ಶುಭ್ಮನ್ ಗಿಲ್, ನಂ.1 ಸ್ಥಾನಕ್ಕೇರುವ ಎಲ್ಲಾ ಅವಕಾಶಗಳನ್ನ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಗಿಲ್, ಈ ಅವಕಾಶವನ್ನ ಇನ್ನಷ್ಟು ಸುಲಭ ಮಾಡಿಕೊಂಡಿದ್ದಾರೆ.

ಸದ್ಯ ವೇಗವಾಗಿ ನಂ.1 ಬ್ಯಾಟರ್ ಆಗುವ ಮೂಲಕ ಧೋನಿ ದಾಖಲೆ ಮುರಿಯಲು ಶುಭ್ಮನ್ ಗಿಲ್ ಅವರಿಗೆ ಇನ್ನೂ ಮೂರು ಇನ್ನಿಂಗ್ಸ್‌ಗಳು ಬಾಕಿ ಇದ್ದು, ಸೆಪ್ಟೆಂಬರ್ 27ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಮತ್ತೊಂದು ಅದ್ಭುತ ಇನ್ನಿಂಗ್ಸ್‌ ಆಡಿದ್ದೇ ಆದಲ್ಲಿ ಧೋನಿ ದಾಖಲೆ ಮುರಿಯುವಲ್ಲಿ ಯಾವುದೇ ಸಂದೇಹವಿಲ್ಲ.

More News