ಭೋಪಾಲ್ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ 12 ವರ್ಷದ ಬಾಲಕಿ ಮೇಲಿನ ಅತ್ಯಾಚಾರಕ್ಕೆ ಗುರಿಯಾಗಿ ಅರೆಬೆತ್ತಲಿನಲ್ಲಿ ರಕ್ಷಣೆಗಾಗಿ ರಸ್ತೆಯಲ್ಲಿ ಓಡಾಡಿಡ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಹಾಗೆಯೇ ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ. ಪ್ರಕರಣದ ಸಂಬಂಧ ಹಲವಾರು ಜನರನ್ನು ವಿಚಾರಣೆಗೆ ಗುರಿಪಡಿಸಿದ ಪೊಲೀಸರು 700 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಪ್ರಕರಣವನ್ನು ಭೇದಿಸಿದ್ದಾರೆ.
ಕೃತ್ಯವೆಸಗಿದ್ದ ಪ್ರಮುಖ ಆರೋಪಿ ಭರತ್ ಸೋನಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಸುಮಾರು 35 ಪೊಲೀಸರು ಹಗಲು ರಾತ್ರಿಯೆನ್ನದೆ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಬಂಧಿತ ಆರೋಪಿ ಭರತ್ ಸೋನಿ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ತಪ್ಪಿಸಲು ಯತ್ನಿಸಿದ್ದ, ಆದರೆ ಪೊಲೀಸ್ ಸಿಬ್ಬಂದಿ ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಅಮಾನವೀಯ ಕೃತ್ಯದ ಬಳಿಕ ಆರೋಪಿಗಳು ಅಟೋವೊಂದರಲ್ಲಿ ಪ್ರಯಾಣ ಬೆಳೆಸಿದ್ದರು. ಅಟೋ ಚಾಲಕ ಕೂಡ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಕೇಶ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ಥ ಬಾಲಕಿಗೆ ಇಬ್ಬರು ಪೊಲೀಸರು ರಕ್ತದಾನ ಮಾಡಿದ್ದಾರೆ. ಹಾಗೆಯೇ ಪೊಲೀಸ್ ಅಧಿಕಾರಿಯೊಬ್ಬರು ಬಾಲಕಿಯನ್ನು ದತ್ತು ಸ್ವೀಕರಿಸಲು ಬಯಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ




