ಬೆಂಗಳೂರು : ಮೈತ್ರಿ ಎಲ್ಲಿ ಆಗಿದೆ, ಯಾವ ರೀತಿ ಆಗಿದೆ ಅನ್ನೋದೇ ಪಕ್ಷವೊಂದರ ಅಧ್ಯಕ್ಷನಾಗಿ ನನಗೆ ತಿಳಿದಿಲ್ಲ, ಈವರೆಗೂ ಈ ಕುರಿತು ನನ್ನ ಜತೆ ಯಾರೂ ಮಾತನಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತಿಳಿಸಿದ್ದಾರಲ್ಲದೆ, ಜೆಡಿಎಸ್ ತೊರೆಯಬೇಕೆ ಇಲ್ಲವೆ ಎನ್ನುವುದನ್ನು ಅಕ್ಟೋಬರ್ 16ಕ್ಕೆ ತಿಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 16 ರ ಬಳಿಕ ಗಟ್ಟಿ ನಿರ್ಧಾರ ಪಡೆದು ಬಹಿರಂಗ ಪಡಿಸಲಾಗುವುದು ಎಂದರು. ಕಾಂಗ್ರೆಸ್, ಆಪ್, jdu ಅಥವಾ ಇನ್ಯಾವ ಪಕ್ಷ ಎಂಬ ನಿರ್ಧಾರ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಜೆಡಿಎಸ್ ನಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿರುವ ರಾಜ್ಯಾಧ್ಯಕ್ಷರು, ತನಗೆ ಹೇಳದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಲ್ಲ ನಿರ್ಧಾರ ಮಾಡುತ್ತಿದ್ದಾರೆ ಎಂಬ ಬೇಸರ ವ್ಯಕ್ತಪಡಿಸಿದರಲ್ಲದೆ, ಹೀಗಾಗಿ ಪಕ್ಷ ಬಿಡಲು ಸಿ ಎಂ ಇಬ್ರಾಹಿಂ ತೀರ್ಮಾನಿಸಿದ್ದಾರೆನ್ನಲಾಗಿದೆ.
ನಾನೊಂದು ಪಕ್ಷದ ಅಧ್ಯಕ್ಷ, ನೀವು ದೆಹಲಿಗೆ ಹೋದಿರಿ, ನನಗೆ ಒಂದು ಮಾತು ಹೇಳಿಲ್ಲ, ಏನು ಚರ್ಚೆ ಮಾಡಿದ್ದೀರಿ ಎನ್ನುವುದನ್ನು ಈವರೆಗೆ ಮಾಹಿತಿ ಬಂದಿಲ್ಲ, ಮೈತ್ರಿ ಎಲ್ಲಿ ಆಗಿದೆ?, ನಾನು ಪಕ್ಷದ ಅಧ್ಯಕ್ಷ, ಪಕ್ಷದಲ್ಲಿ ಎಲ್ಲಿ ಚರ್ಚೆ ಆಗಿದೆ? ಎಂದು ಮರುಪ್ರಶ್ನಿಸಿದರು.
ಜನತಾದಳದ ಒರಿಜಿನಲ್ ವೋಟ್ ಈ ಬಾರಿ ಕಾಂಗ್ರೆಸ್ ಗೆ ಹೋಗಿದೆ, ಅದನ್ನು ಒಪ್ಪಲು ತಯಾರಿಲ್ಲ, ಅದನ್ನು ಮೊದಲು ಒಪ್ಪಿಕೊಳ್ಳಿ ಎಂದು ಒತ್ತಾಯ ಮಾಡಿದ ಸಿಎಂ ಇಬ್ರಾಹಿಂ, ಪಕ್ಷದಲ್ಲಿ ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು, ನಿರ್ಧಾರವಾಗಬೇಕು ಎಂದು ಮೈತ್ರಿ ಕುರಿತು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷವನ್ನು ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷ, ಸಿದ್ದಾಂತ ಸುಮ್ಮನೆ ಬಿಟ್ಟು ಕೊಡಲು ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಯಡಿಯೂರಪ್ಪನವರನ್ನೇ ಕರೆದಿಲ್, ಅವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ ಎಂದರು.
ನಾಳೆಯ ಸಭೆಗೆ ಕರೆದಿದ್ದಾರೆ, ಹೋಗಲ್ಲ ಎಂದು ಹೇಳಿದ ಅವರು, ದೆಹಲಿಗೆ ಹೋಗುವಾಗ ಹೇಳದೇ ಹೋಗಿದ್ದು ನನಗೆ ನೋವಾಗಿದೆ ಎಂದರು. ಈಗ ನಾನು ಪಕ್ಷದ ಕಾರ್ಯಕರ್ತರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ, ನನ್ನ ಕಡೆಗಣಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ವಯಸ್ಸಾದ ಕಾಲದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕೈ ಹಿಡಿದೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದ ಅವರು, ನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯ, 60 ವರ್ಷದ ರಾಜಕೀಯದಲ್ಲಿ ಕಳಂಕ ನನ್ನ ಮೇಲೆ ಇಲ್ಲ, 16 ರಂದು ಮುಂದೆ ಏನು ಮಾಡಬೇಕು ಅಂತಾ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇನೆ, ಪವಾರ್, ನಿತೀಶ್, ಆಪ್, ಕಾಂಗ್ರೆಸ್ ಪಕ್ಷವೋ ಏನು ಅಂತಾ ತೀರ್ಮಾನಿಸುತ್ತೇನೆ, ಕಾಂಗ್ರೆಸ್, ಬಿಜೆಪಿಗೆ ಒಳ್ಳೆಯದಾಗಬೇಕು ಅಂದರೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಇರಬೇಕು ಎಂದು ತಿಳಿಸಿದರು.




