Death Threat to Nijagunananda Swamiji:: ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ: ಸಚಿವರ ಹೆಸರೂ ಉಲ್ಲೇಖಿಸಿ ಧಮ್ಕಿ..

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೈಲೂರಿನಲ್ಲಿರುವ ನಿಷ್ಕಲ್ಮಶ ಮಠದ ನಿಜಗುಣಾನಂದ ಸ್ವಾಮೀಜಿ ಅವರನ್ನು ಕೊಲೆ ಮಾಡುವುದಾಗಿ ಅವರ ಮಠಕ್ಕೆ ಎರಡನೇ ಬಾರಿ ಕೊಲೆ ಬೆದರಿಕೆ ಪತ್ರ ಬರೆಯಲಾಗಿದೆ.

“ನಿಜಗುಣಾನಂದ ಸ್ವಾಮಿಗಳೇ ನಿಮ್ಮನ್ನು ಹಾಗೂ ನಿಮ್ಮ ಜೊತೆ ಇರುವ ಧರ್ಮದ್ರೋಹಿಗಳನ್ನು, ದೇಶದ್ರೋಹಿಗಳನ್ನು ಜನವರಿ 29 ರಿಂದ ‘ಸಂಹಾರ’ ಮಾಡುವುದಕ್ಕೆ ಮುಹೂರ್ತ ನಿಗದಿಯಾಗಿದೆ,” ಎಂದು ಪತ್ರ ಬರೆದು ಬೆದರಿಕೆ ಹಾಕಿದ್ದ ಅನಾಮಿಕ ವ್ಯಕ್ತಿ, ಮತ್ತೊಂದು‌ ಪತ್ರವನ್ನು ಬರೆದಿದ್ದು, ರಾಜ್ಯ ಸರ್ಕಾರದ ಸಚಿವರ ಹೆಸರನ್ನು ಉಲ್ಲೇಖಿಸುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಪತ್ರದಲ್ಲಿ ಏನಿದೆ..?

“ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ. ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ‌ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ‌ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದಿಯಾ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ. ನಿನ್ನಂಥ ದುಷ್ಟ ರಾಕ್ಷಸಿ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಎಸ್.ಜಿ ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್, ಪ್ರೋ.ಭಗವಾನ್,ಪ್ರೋ.ಮಹೇಶ್ ಚಂದ್ರ, ಬಿಟಿ ಲಲಿತಾನಾಯಕ್, ನಟ ಚೇತನ್, ನಟ ಪ್ರಕಾಶರಾಜ್. ಸಚಿವರಾದ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಹಾಗೂ ಧ್ವಾರಕಾನಾಥ, ದೇವನೂರು ಮಹದೇಪ್ಪ, ಬಿ.ಎಲ್ ವೇಣು, ನೀವು ನಿಮ್ಮ ತಂದೆ ತಾಯಿಗಳಿಗೆ ಹುಟ್ಟಿದ್ದರೆ ಕೇಳುವ ಪ್ರಶ್ನೆಗೆ ಉತ್ತರ ಕೊಡಿ ಎಂದು ಸವಾಲು ಹಾಕಲಾಗಿದೆ.‌ ಮತಾಂಧ ಮುಸ್ಲಿಂಮರು, ಪಾಕಿಸ್ತಾನಿಗಳು, ಭಯೋತ್ಪಾದಕರು ಮಾಡ್ತೊರೋದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದಿಯೇ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡ್ತಿರೋದು ತಪ್ಪು ‌ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ? ದೈರ್ಯವಿದ್ದರೆ ಹೇಳಿ ಇಲ್ಲವಾದರೆ ನಿಮ್ಮ ಕೊನೆಯ ‌ದಿನಗಳನ್ನು ಎಣಿಸಿ” ಎಂದು ಬೆದರಿಕೆ ಪತ್ರ ಬರೆಯಲಾಗಿದೆ.

ಮತ್ತೊಂದೆಡೆ ಖ್ಯಾತ ಸಾಹಿತಿಗಳಾದ ಕುಂ.ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬಿ.ಎಲ್.ವೇಣು, ಬಿ.ಟಿ.ಲಲಿತಾ ನಾಯಕ್‌, ವಸುಂಧರ ಭೂಪತಿ ಸೇರಿದಂತೆ ಕೆಲವು ಸ್ವಾಮೀಜಿಗಳಿಗೆ ಅನಾಮಧೇಯ ಹೆಸರಿನಲ್ಲಿ ಜೀವ ಬೆದರಿಕೆ ಪತ್ರ ಕಳುಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದಾವಣಗೆರೆಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪತ್ರ ಬರೆಯುತ್ತಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಶಿವಾಜಿ ರಾವ್‌ ಜಾಧವ್ ಬಂಧಿತ ಆರೋಪಿ ಎಂದು ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ.

More News