Sridevi Death: ಅತಿಲೋಕ ಸುಂದರಿ ಶ್ರೀದೇವಿ ಸಾವಿನ ಕುರಿತು ಕೊನೆಗೂ ಮೌನ ಮುರಿದ ಪತಿ

ಬೆಂಗಳೂರು: ಸಿನಿ ಲೋಕದ ಅತಿಲೋಕ ಸುಂದರಿ ಶ್ರೀದೇವಿ ಸಾವು ಇನ್ನೂ ನಿಗೂಢ.. ದುಬೈನ ನಿವಾಸದಲ್ಲಿ ಆಕಸ್ಮಿಕವಾಗಿ ಬಾತ್‌ ಟಬ್‌ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಿತ್ತಾದರೂ ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿತ್ತು.

ಆಸ್ತಿ ಆಸೆಗಾಗಿ ಪತಿಯೇ ಹೀಗೆ ಮಾಡಿದ್ದಾರೆ ಎಂಬ ಚರ್ಚೆ ಬಿರುಸುಗೊಂಡಿತ್ತು. ಇದೀಗ ಬಾಲಿವುಡ್ ಬೆಡಗಿ ಶ್ರೀದೇವಿ ಮೃತಪಟ್ಟ 5 ವರ್ಷಗಳ ಬಳಿಕ ಪತಿ ಬೋನಿ ಕಪೂರ್, ಪತ್ನಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು.. ಅಂದವಾಗಿ ಕಾಣಿಸ್ಬೇಕೆಂದು ಮಾಡ್ತಿದ್ದ ಅತಿಯಾದ ಕಾಳಜಿಯೇ ಶ್ರೀದೇವಿಗೆ ಸಾವಿಗೆ ಕಾರಣ ಎಂದು ಬಾಯ್ಬಿಟ್ಟಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಬೋನಿ ಕಪೂರ್,
ತೆರೆಮೇಲೆ ಅಂದವಾಗಿ ಕಾಣಿಸಬೇಕು ಎಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ನಮ್ಮ ಮದುವೆ ಬಳಿಕ ನನಗೆ ಈ ವಿಷಯ ತಿಳಿಯಿತು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದಳು. ಇದರಿಂದ ಸಾಕಷ್ಟು ಬಾರಿ ನಿತ್ರಾಣಗೊಂಡು ಬೀಳುತ್ತಿದ್ದಳು. ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಜಾಗ್ರತೆಯಿಂದ ಇರಲು ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ ಆಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು ಎಂದರು.

ಶ್ರೀದೇವಿ ನಿಧನದ ಬಳಿಕ ನಟ ನಾಗಾರ್ಜುನ ಸಾಂತ್ವನ ಹೇಳಲು ಮನೆಗೆ ಬಂದಿದ್ದರು. ಆ ವೇಳೆ ಅವರು ಹೇಳಿದ ವಿಷಯ ಕೇಳಿ ನನಗೆ ಗಾಬರಿಯಾಯ್ತು.. ಶ್ರೀದೇವಿ ಮನೆಯಲ್ಲಿ ಅಷ್ಟೇ ಅಲ್ಲ.. ನಟ ನಾಗಾರ್ಜುನ್ ಜೊತೆಗೆ ಸಿನಿಮಾ ಚಿತ್ರೀಕರಣದ ವೇಳೆಯೂ ಇದೇ ರೀತಿ ಡಯೆಟ್ ಮಾಡಿ ಬಾತ್ರೂಮ್‌ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು ಎಂದು ಅವರು ಹೇಳಿದ್ದರು. ನಾನು ವೈದ್ಯರಿಗೆ ಹೇಳಿ ಕೊಂಚ ಉಪ್ಪು ತಿನ್ನುವಂತೆ ಶಿಫಾರಸ್ಸು ಮಾಡುವಂತೆ ಮಾಡಿದ್ದೆ. ಊಟದ ಸಮಯದಲ್ಲಿ ನಾನು ಕೂಡ ಉಪ್ಪು ಬೆರಸಿ ಕೊಡುತ್ತಿದ್ದೆ. ಆದರೆ ಆಕೆ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ವಿವರಿಸಿದರು.

More News