Asian Games: ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಯುವ ಬ್ಯಾಟರ್ ಜೈಸ್ವಾಲ್

ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಲ್ವಾಸ್, ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಶತಕದ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಭಾರತದ ಯುವ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್(100 ರನ್, 49 ಬಾಲ್, 8 ಬೌಂಡರಿ, 7 ಸಿಕ್ಸ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್‌ ಆರಂಭದಿಂದಲೂ ಬಿರುಸಿನ ಆಟವಾಡಿದ ಜೈಸ್ವಾಲ್ ಶತಕದ ಸಂಭ್ರಮ ಆಚರಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಯುವ ಬ್ಯಾಟರ್ ಎನಿಸಿದರು. 21 ವರ್ಷ, 9 ತಿಂಗಳು ಮತ್ತು 13 ದಿನದಲ್ಲಿ ಈ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್, ಆ ಮೂಲಕ ಈ ಹಿಂದೆ ಕಿರಿಯ ವಯಸ್ಸಿನಲ್ಲೇ ಟಿ20 ಶತಕ ಬಾರಿಸಿದ್ದ ಶುಭ್ಮನ್ ಗಿಲ್ ಅವರ ದಾಖಲೆ‌ ಮುರಿದರು.

ಟೀಂ ಇಂಡಿಯಾ ಬ್ಯಾಟಿಂಗ್ ಅಸ್ತ್ರವಾಗಿರುವ ಶುಭ್ಮನ್ ಗಿಲ್, ಈ ಹಿಂದೆ 23 ವರ್ಷ 146 ದಿನದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ಮೂಲಕ ಈ ದಾಖಲೆ ಹೊಂದಿದ್ದರು. ಅಲ್ಲದೇ ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿರುವ ಭಾರತದ 8ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಯಶಸ್ವಿ ಜೈಸ್ವಾಲ್ ಭಾಜನರಾದರು. ಭಾರತದ ಪರ ಈವರೆಗೂ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಕೆಎಲ್ ರಾಹುಲ್ ಅವರುಗಳು ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದಾರೆ.

ಟೀಂ ಇಂಡಿಯಾದ ಭವಿಷ್ಯದ ಭರವಸೆಯ ಬ್ಯಾಟರ್ ಎನಿಸಿರುವ ಯಶಸ್ವಿ ಜೈಸ್ವಾಲ್ ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲೂ ಶತಕ ಸಿಡಿಸಿ ಮಿಂಚಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನಾಡಿದ್ದ ಯಶಸ್ವಿ ಜೈಸ್ವಾಲ್ ತಮ್ಮ ಮೊದಲ ಅಂತಾರಾಷ್ಟ್ರೀಯ ಟೆಸ್ಟ್‌ನಲ್ಲೇ 171 ರನ್‌ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

More News