SHIVAMOGGA UNDER CONTROL: ಶಿವಮೊಗ್ಗದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ: ಯಾರೂ ಆತಂಕ ಪಡುವ ಅಗತ್ಯವಿಲ್ಲ: ಗೃಹ ಸಚಿವ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ, ಯಾರೂ ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಕಾರಣ ಯಾರು ಅನ್ನೋದು ತನಿಖೆ ನಡೆಯುತ್ತಿದೆ, ಲಾ ಅಂಡ್ ಆರ್ಡರ್ ವಿಭಾಗದ ಎಡಿಜಿಪಿಯನ್ನೇ ನಾವು ಅಲ್ಲಿಗೆ ಕಳಿಸಿದ್ದೇವೆ ಎಂದು ತಿಳಿಸಿದರು.
ಎರಡೂ ಕಡೆಯಿಂದಲೂ ಕಲ್ಲು ತೂರಾಟ ನಡೆಸಿದ್ದಾರೆ, ಘಟನೆ ಸಂಬಂಧ ಕೆಲವರ ಬಂಧನ ಆಗಿದೆ, ತನಿಖೆ ನಡೆಯುತ್ತಿದೆ, ತನಿಖೆ ಮುಗಿದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.
ಸಣ್ಣ ಘಟನೆ ಎಂಬ ಹೇಳಿಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಣ್ಣ ಘಟನೆ ಅಂತ ಹೇಳಿದ್ದು ಆ ಕಾರಣಕ್ಕೆ ಅಲ್ಲ, ಹಿಂದೆಲ್ಲಾ ಇಂತಹ ಘಟನೆಗಳಾಗಿವೆ, ಅದೇ ಶಿವಮೊಗ್ಗದಲ್ಲಿ ಘಟನೆ ಆಗಿರ್ಲಿಲ್ವಾ..? ಎಂದು ಮರುಪ್ರಶ್ನಿಸಿದ ಅವರು, ಆ ರೀತಿ ಹೇಳಿದ್ದಕ್ಕೆ ಅದನ್ನೇ ಟ್ವಿಸ್ಟ್ ಮಾಡಿ ಟರ್ನ್ ಮಾಡಿ ಬೇಜವಾಬ್ದಾರಿ ಹೇಳಿಕೆ ಅಂತಿದ್ದಾರೆ ಎಂದರು.
ನಾವು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಶಾಂತಿ ಕಾಪಾಡಿದ್ದೇವೆ, ಕಾನೂನು ವಿರೋಧಿ ಕೆಲಸಗಳು ಆಗಬಾರದು ಅಂತ ಎಲ್ಲ ಕ್ರಮಗಳನ್ನೂ ಆಗಿಂದಾಗ್ಗೆ ಕೈಗೊಳ್ತಿದ್ದೇವೆ, ವಿಪಕ್ಷದವ್ರು ಹೇಳೋದನ್ನು ಹೇಳ್ತಿರ್ತಾರೆ, ಅವರು ನೀರಿನಿಂದ ಮೀನು ಆಚೆ ಹಾಕಿದ ಹಾಗೆ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ಅಧಿಕಾರ ಹೋಗಿದೆ ಅಂತ ಅವರಿಗೆ ಬೇಸರ ಆಗಿದೆ, ಹಾಗಾಗಿ ಅವರು ಹಾಗೆಲ್ಲ ಮಾತನಾಡುತ್ತಿದ್ದಾರೆ, ಅವರು ಹೇಳಿದ್ದರಲ್ಲಿ ಸಲಹೆ ಇದ್ರೆ ತಗೋತೇವೆ, ನಮ್ಮ ತಪ್ಪಿದ್ರೆ ತಿದ್ಕೋತೇವೆ ಎಂದು ಹೇಳಿದರು.
ಡಿಜೆ ಹಳ್ಳಿ ಕೆಜಿ ಹಳ್ಳಿ ಗೋಲಿಬಾರ್ ಕುರಿತ ವರದಿ ಅಂಗೀಕಾರ ವಿಚಾರವಾಗಿ ಮಾತನಾಡಿದ ಅವರು, 2022 ರ ಡಿಸೆಂಬರ್ ನಲ್ಲೇ ಬಿಜೆಪಿ ಸರ್ಕಾರ ಇದ್ದಾಗಲೇ ವರದಿ ಕೊಟ್ಟಿದ್ದರು. ಆ ವರದಿಯನ್ನು ಅವರೇ ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಂಡಿದ್ದನ್ನು ನಾವು ತಿರಸ್ಕರಿಸಲು ಆಗುತ್ತಾ? ಹಾಗಾಗಿ ಅದರ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ ಎಂದರು.
ಜಾತಿ ಜನಗಣತಿ
ಬಿಹಾರ ರಾಜ್ಯದಂತೆ ಕರ್ನಾಟಕದಲ್ಲೂ ಜಾತಿ ಸಮೀಕ್ಷೆ ಅಂಗೀಕಾರಕ್ಕೆ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ನಾವು ಚರ್ಚೆ ಮಾಡುವಾಗ ನಾನು ನನ್ನ ಅಭಿಪ್ರಾಯ ತಿಳಿಸುತ್ತೇನೆ, ನನ್ನ ಅಭಿಪ್ರಾಯ ಮುಖ್ಯ ಆಗೋದಿಲ್ಲ, ಸರ್ಕಾರ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರುತ್ತದೆ ಎಂದರು.
ವರದಿ ಬಗ್ಗೆ ಮುಖ್ಯಮಂತ್ರಿಗಳು ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡುತ್ತಾರೆ, ನಂತರ ಅಂತಿಮವಾಗಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತೆ, ಅಲ್ಲೀವರೆಗೂ ಕಾಯೋಣ ಎಂದರು.
ಸರ್ಕಾರದ ಭವಿಷ್ಯ
ಸಂಕ್ರಾತಿ ಬಳಿಕ ಈ ಸರ್ಕಾರ ಇರಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸಿ ಪಿ ಯೋಗೀಶ್ವರ್ ಭವಿಷ್ಯ ನುಡಿದ ವಿಚಾರವಾಗಿ ಮಾತನಾಡಿದ ಅವರು, ಇವರೆಲ್ಲ ಯಾವಾಗ ಜ್ಯೋತಿಷ್ಯ ಹೇಳಲು ಶುರು ಮಾಡಿದರೋ ಗೊತ್ತಿಲ್ಲ, ನಮ್ಮ ಸರ್ಕಾರದಲ್ಲಿ ಯಾವ ಅಸಮಾಧಾನ ಯಾರಿಗೂ ಇಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದರು.
ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ, ಇದು ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ, ಹಾಗಾಗಿ ಹೀಗೆಲ್ಲ ಮಾತನಾಡುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ಅವರಿಗೆ ಪರಮೇಶ್ವರ್ ತಿರುಗೇಟು ನೀಡಿದರು.

More News