ಬೆಂಗಳೂರು: ಅಕ್ಟೋಬರ್ ಹತ್ತನೇ ತಾರೀಕು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಗೆ ಕನ್ನಡ ಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ.
“ಕಾವೇರಿ ಸಂಕಷ್ಟ ಸೂತ್ರದ ಬಗ್ಗೆ ತೀರ್ಮಾನ ಮಾಡಿ”
ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಕನ್ನಡ ಪರ ಸಂಘಟನೆ ನಾಯಕ ವಾಟಾಳ್ ನಾಗರಾಜ್ ಮತ್ತೇ ಬಂದ್ ಗೆ ಕರೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜಕೀಯ ಆಟ ಬೇಡ. ಇಬ್ಬರೂ ಹಾಲಿ, ಮಾಜಿ ಸಿಎಂ ಪ್ರಧಾನಿಯವ್ರನ್ನ ಕರೆಸಿ ಮಾತನಾಡಿ. ಪ್ರಧಾನಿಯಾಗಿ ನನಗೇನು ಗೊತ್ತಿಲ್ಲ ಅನ್ನೋದು ಬೇಡ.
ಹಿಂದೆಲ್ಲಾ ಪ್ರಧಾನಿಗಳು ಸಮಸ್ಯೆ ಬಗೆ ಹರಿಸಿದ್ದಾರೆ. ಈಗ ಸಂಕಷ್ಟದ ಸ್ಥಿತಿ ಎದುರಾಗಿದೆ. ನೀರಿಲ್ಲದೇ ಇರುವಾಗ ಏನ್ ಮಾಡಬೇಕು ಎಂದು ಕಾವೇರಿ ಸಂಕಷ್ಟ ಸೂತ್ರದ ಬಗ್ಗೆ ತೀರ್ಮಾನ ಮಾಡಿ ಎಂದು ಒತ್ತಾಯಿಸಿದರು.
ಕಾವೇರಿ ವಿಚಾರದಲ್ಲಿ ಪ್ರತಿಭಟನೆ ಮಾಡುವ ಕುರಿತು ಮಾತನಾಡಿದ ಅವರು, ನಾವು ತಮಿಳುನಾಡಿನ ಬ್ಲಾಕ್ ಮೇಲ್, ಸ್ಟಾಲಿನ್ ಸರ್ಕಾರದ ವಿರುದ್ದ ಐದನೇ ತಾರೀಖು ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ಬಾರಿ ದೊಡ್ಡ ಮೆರವಣಿಗೆ ನಿರ್ಧರಿಸಿದ್ದೇವೆ. ಅಕ್ಟೋಬರ್ ಹತ್ತನೇ ತಾರೀಖು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿದೆ. ಅತ್ತಿಬೆಲೆ ಬಳಿ ಹೆದ್ದಾರಿ ಬಂದ್ ಮಾಡ್ತೀವಿ.
ನಾರಾಯಣ ಗೌಡ ನಾನು ಸ್ನೇಹಿತರು, ನಾವು ನಾವು ಯಾಕೆ ಕಿತ್ತಾಡಬೇಕು..? ನಾವು ಸ್ಟಾಲಿನ್ ಮೇಲೆ ಹೋರಾಟ ಮಾಡೋದು ಎಂದರು.
“ಸಿನಿಮಾದವರು ಸ್ಪಷ್ಟ ಮಾತುಗಳನ್ನಾಡುತ್ತಿಲ್ಲ, ಸುಮ್ನೆ ನಾವಿದ್ದೀವಿ ಅಂತಾರೆ”
ಇದೇ ವೇಳೆ ಸಿನಿಮಾ ನಟ ನಟಿಯರ ವಿರುದ್ಧ ಅಸಮಧಾನಗೊಂಡು ಮಾತನಾಡಿದ ಅವರು, ಸಿನಿಮಾದವ್ರು ಅವರಿಚ್ಚೆ ಬಂದಂತೆ ಮಾತನಾಡ್ತಾರೆ. ವೀರಪ್ಪ ಮೋಯ್ಲಿ ಅವರಿಗೂ ತೊಂದರೆ ಆಗಿದೆ, ಇಬ್ಬರು ಕುಳಿತು ಮಾತನಾಡಿ ಅಂತಾರೆ. ಎಲ್ಲಿ ಕೂತ್ಕೊಂಡು ಮಾತನಾಡಬೇಕು..? ಅವರ ಮನೆಯಲ್ಲಾ..?, ಚಿಕ್ಕಬಳ್ಳಾಪುರದಲ್ಲಾ..? ದೊಡ್ಡಬಳ್ಳಾಪುರದಲ್ಲಾ..?
ಸಿನಿಮಾದವರು ಸ್ಪಷ್ಟ ಮಾತುಗಳನ್ನಾಡುತ್ತಿಲ್ಲ, ಸುಮ್ನೆ ನಾವಿದ್ದೀವಿ ಅಂತಾರೆ. ನಾವೆ ಬೇವರ್ಸೆಗಳೇನೊ ಅನಿಸಿದೆ
ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ೨೯ ರ ಬಂದ್ ಉತ್ತರ ಕೊಟ್ಟಿದೆ ಎಂದು ಕುಟುಕಿದರು.
ತಮಿಳುನಾಡಿನವ್ರು ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಬಹಳ ನೋವಾಗುತ್ತೆ, ಕೆಆರ್ ಎಸ್‌ನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ಜಲಸಂಪನ್ಮೂಲ ಸಚಿವರು ಅಷ್ಟು ಬಂತು ಇಷ್ಟು ಬಂತು ಅಂತ ಅದೇನೋ ಹೇಳ್ತಾರೆ ಪಾಪ. ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೇಶದ ಮೇಲೆ ಯುದ್ದ ಮಾಡಿದಂತೆ ಆಡ್ತಾರೆ. ತಮಿಳುನಾಡಿನವ್ರು ಮಾರುವೇಶದಲ್ಲಿ ಬಂದು ಕೆಆರ್ ಎಸ್ ರೌಂಡ್ ಹಾಕಿಕೊಂಡು ಹೋಗಲಿ. ಸ್ಟಾಲಿನ್ ಏನ್ ಬರೋದು ಬೇಡ. ನಮ್ಮನ್ನ ಏನು ಮಾಡಬೇಕು ಅನ್ಕೊಂಡಿದ್ದಾರೆ..? ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದೆ. ಅರ್ಜಿ ಏನಾಯ್ತು, ಅಲ್ಲಿಯವರೆಗೆ ನೀರು ಏನಾಗ್ತಿದೆ ಸತ್ಯ ಬೇಕು ನಮಗೆ. ತಮಿಳುನಾಡಿಗೆ ಗಂಭೀರವಾಗಿ ಹೇಳ್ತಿನಿ. ರಾಜಕೀಯ ಮಾಡ್ತಿದ್ದೀರ ರಾಜಕೀಯ ಬೇಡ. ನಿಮ್ಮನ್ನ ನಾವು ಕೆಟ್ಟದಾಗಿ ನೋಡಬೇಕಾಗುತ್ತೆ. ಪಳನಿಸ್ವಾಮಿ ಕೂಡ ಬೀದಿಗೆ ಇಳಿದಿದ್ದಾರೆ. ಇದನ್ನ ಕರ್ನಾಟಕದ ಜನತೆ ಗಂಭೀರವಾಗಿ ಚಿಂತನೆ ಮಾಡಬೇಕು. ಯಾರಿಗೂ ಗಂಭೀರತೆ ಇಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ದೂರಿದರು.
ನಮ್ಮಲ್ಲಿ ನೀರಿಲ್ಲ ಅಂತ ಸ್ಪಷ್ಟವಾಗಿ ಹೇಳ್ತೀವಿ. ಕೆಆರ್‌ಎಸ್ ನಲ್ಲಿ ಕನ್ನಡ ಒಕ್ಕೂಟದ ಮೇಳ ಮಾಡ್ತೀವಿ. ನೂರಾರು ವಾಹನಗಳಲ್ಲಿ ತೆರಳಿ ಕನ್ನಡ ಒಕ್ಕೂಟದ ಮೇಳ, ಕಪ್ಪು ಬಾವುಟ ಪ್ರದರ್ಶನ , ಪ್ರತಿಭಟನೆ ಕರಾಳ ದಿನ ಆಚರಿಸುತ್ತಿದ್ದೇವೆ. ಸಂಸದರು ಈಗಲಾದರೂ ಧೈರ್ಯ ಮಾಡಿ ರಾಜೀನಾಮೆ ಕೊಡಿ. ಇನ್ನ ಆರು ತಿಂಗಳಲ್ಲಿ ಎಲೆಕ್ಷನ್ ಬರುತ್ತೆ, ರಾಜೀನಾಮೆ ಕೊಟ್ರೆ ಶಕ್ತಿ ಗೌರವ ಇರುತ್ತೆ.ಮೋದಿಯವ್ರು ಎರಡೂ ರಾಜ್ಯದವರನ್ನಕರೆಸಿ ಮಾತನಾಡಿ. ಅದಕ್ಕೂ ಮುನ್ನ ನಿಮ್ಮದೇ ಆದ ಒಂದು ತಂಡ ಕಳಿಸಿ ವರದಿ ಪಡೆಯಿರಿ ಎಂದು ಸಲಹೆ ನೀಡಿದರು.




