ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯ ಮೂರ್ತಿಯಾಗಿ ಸತೀಶ್ಚಂದ್ರ ಶರ್ಮಾ ನೇಮಕ

ಬೆಂಗಳೂರು : ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರನ್ನು ರಾಜ್ಯ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ರಾಷ್ಟ್ರಪತಿಯವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ತೆರವಾಗಿದ್ದ ಹುದ್ದೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕಗೊಳಿಸಲಾಗಿದೆ.ಕರ್ನಾಟಕ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯ ಮೂರ್ತಿಯಾದ ಸತೀಶ್‌ ಚಂದ್ರ ಶರ್ಮಾ ಅವರನ್ನು ಭಾರತ ಸಂವಿಧಾನದ 223 ವಿಧಿಯಡಿ ಪ್ರದತ್ತವಾದ ಅಧಿಕಾರ ಬಳಸಿ ರಾಷ್ಟ್ರಪತಿ ಅವರು ನೇಮಕಗೊಳಿಸಿದ್ದಾರೆಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ,ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಕ ಗೊಂಡಿದ್ದರು.ಆಗಸ್ಟ್‌ 17ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಕೊಲಿಜಿಯಂ ನ್ಯಾಯಮೂ ರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ,ವಿಕ್ರಮ್‌ ನಾಥ್‌,ಜೆ.ಕೆ.ಮಹೇಶ್ವರಿ,ಹಿಮಾ ಕೊಹ್ಲಿ,ಬಿ.ವಿ.ನಾಗ ರತ್ನ,ಸಿ.ಟಿ.ರವಿಕುಮಾರ್‌,ಎಂ.ಎಂ.ಸುಂದರೇಶ್‌,ಬೆಲಾ ತ್ರಿವೇದಿ ಹಾಗೂ ಹಿರಿಯ ವಕೀಲ ಪಿ.ಎಸ್. ನರಸಿಂಹ ಅವರ ಹೆಸರುಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು.ಅಂತೆಯೇ ರಾಷ್ಟ್ರಪತಿಗಳು ಈ ಎಲ್ಲಾ ನ್ಯಾಯಮೂರ್ತಿಗಳ ನೇಮಕಕ್ಕೆ ಅಂಕಿತ ಹಾಕಿದ್ದಾರೆ.

More News

You cannot copy content of this page