ಬೆಂಗಳೂರು : ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಘೋಷಿಸಿದರು.
ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯೋತ್ಸವ ಈ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿಗೆ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮಿತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರನ್ನು ಅಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.

ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ. ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಇನ್ನು ಮುಂದೆ ಯಾರೂ ಬಯೋ ಡೇಟಾ ತಯಾರು ಮಾಡಬೇಕಾದ, ಪತ್ರಿಕಾ ತುಣುಕುಗಳನ್ನು ಜೋಡಿಸಿಟ್ಟು ತೋರಿಸುವ ಅಗತ್ಯವಿಲ್ಲ ಎಂದು ಪ್ರಶಸ್ತಿ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹಳ ಪ್ರತಿಷ್ಠಿತವಾದ್ದದ್ದು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾನದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ ಮನಸ್ಸು ಒಳ್ಳೆಯದಿರಬೇಕು. ಪೌರಕಾರ್ಮಿಕರಿಗೆ ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ. ಆಯ್ಕೆ ಶೋಧನೆಯಿಂದಾಗಬೇಕು ಹೊರತಾಗಿ ಅರ್ಜಿಗಳಿಂದ ಅಲ್ಲ ಎಂದರು.

ಪ್ರತಿಭೆಗೆ ವಯಸ್ಸಿನ ಗಡಿ ಮಿತಿಗಳಿಲ್ಲ: 60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರತಿಭೆ ಎನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೇಷ್ಟೋ ಮಕ್ಕಳು ಎಷ್ಟೊಂದು ಕ್ಷೇತ್ರಗಳಲ್ಲಿ ಪ್ರತಿಭಾವಂತರಿದ್ದಾರೆ.
ಕನ್ನಡ ನಾಡಿನಲ್ಲಿ ಎಷ್ಟು ನೀರಜ್ ಛೋಪ್ರಾ ಒಬ್ಬರಿಗೆ ಒಲಂಪಿಕ್ಸ್ ಚಿನ್ನದ ಪದಕ ದೊರೆತಿರುವುದು ಇಡೀ ದೇಶಕ್ಕೆ ಸ್ಫೂರ್ತಿ ದೊರೆತಿದೆ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು ವಯಸ್ಸನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದರು.
ಕನ್ನಡದ ಅಂತರ್ಗತ ಶಕ್ತಿಯೇ ಪ್ರೀತಿ ವಿಶ್ವಾಸ :
ಕನ್ನಡದ ಅಂತರ್ಗತ ಶಕ್ತಿಯೇ ಪ್ರೀತಿ ವಿಶ್ವಾಸ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಕನ್ನಡ ನಾಡಿನ ಶ್ರೀಮಂತ ನಿಸರ್ಗ, ಅರಣ್ಯ ಸಂಪತ್ತು, ವಿವಿಧ ಕೃಷಿ, ಋತುಗಳು, ನದಿಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಇವನ್ನು ಉಳಿಸಿ ಬೆಳೆಸಬೇಕು ಎಂದು ಕರೆನೀಡಿದರು.
ಹೃದಯ ವೈಶಾಲ್ಯತೆ, ಸ್ವಾಭಿಮಾನಿ, ಕಠಿಣ ಪರಿಶ್ರಮದ ಗುಣಗಳನ್ನು ಕನ್ನಡಿಗರು ಉಳಿಸಿ ಬೆಳೆಸಿ ಕರ್ನಾಟಕವನ್ನು ಸಮೃದ್ಧ ರಾಜ್ಯವನ್ನಾಗಿಸಲು ಬಳಸಬೇಕು. ನಾಡಿನ ಜನ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ,ಶೈಕ್ಷಣಿಕವಾಗಿ ಶ್ರೀಮಂತರಾದರೆ ರಾಜ್ಯ ಶ್ರೀಮಂತವಾಗುತ್ತದೆ ಎಂದರು.
ಸಮಾಜದಿಂದ ಪಡೆದು ಸಮಾಜಕ್ಕೆ ಮರಳಿ ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ, ಸಾಹಿತ್ಯ, ಕಲೆ, ಸಂಸ್ಕೃತಿ, ನೃತ್ಯ, ಹಾಡುಗಾರಿಕೆ ಎಲ್ಲಾ ರಂಗಗಳನ್ನು ಸಾಧನೆ ಮಾಡಿದ ಸಾಧಕರು, ಉತ್ತಮ ಸಮಾಜ ನಿರ್ಮಾಣಕ್ಕೆ ನಿರ್ಲಿಪ್ತ ಭಾವನೆಯಿಂದ ಸೇವೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಪರ್ವ ಪ್ರಾರಂಭಿಸುವ ಸರ್ಕಾರದ ಗುರಿ ಮುಂದಿನ ದಿನಗಳಲ್ಲಿ ಕನ್ನಡದ ಪರ್ವ ಪ್ರಾರಂಭವಾಗಬೇಕು. ಎಲ್ಲ ರಂಗದಲ್ಲಿ ನಮ್ಮ ದೇಶದಲ್ಲಿ ಮೊದಲನೇ ಸ್ಥಾನ ಕನ್ನಡ, ಕನ್ನಡಿಗರಿಗೆ ಇರಬೇಕು ಎಂದ ಮುಖ್ಯಮಂತ್ರಿಗಳು, 8 ಜ್ಞಾನಪೀಠ ಪ್ರಶಸ್ತಿ ಪಡೆದ ಇನ್ನೊಂದು ಭಾಷೆ ಇಲ್ಲ. ಬೆಂಗಳೂರಿನಲ್ಲಿ ಜ್ಞಾನ, ತಂತ್ರಜ್ಞಾನದ ಬೆಳವಣಿಗೆ ಬಗ್ಗೆ ಬೇಡಿಕೆ ಇದೆ. ಕರ್ನಾಟಕದಲ್ಲಿ ಬೆಳೆಯುವ ಮಲೆನಾಡಿನ ಕಾಫಿ, ಮೆಣಸು, ಮೆಣಸಿನಕಾಯಿ, ರೇಷ್ಮೆ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ ಎಂದು ತಿಳಿಸಿದರು..
ಈ ರೀತಿ ಜನರ ಆರ್ಥಿಕ ಚಟುವಟಿಕೆ ಹೆಚ್ಚಾದಾಗ, ಶೈಕ್ಷಣಿಕ, ಸಾಂಸ್ಕೃತಿಕ ಬೆಳವಣಿಗೆಯೂ ಆಗುತ್ತದೆ. ನಮ್ಮ ಶಕ್ತಿಗಳು, ಕೊರತೆಗಳನ್ನು ಗುರುತಿಸಬೇಕು. ಕನ್ನಡಿಗರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಹೊಸ ಚಿಂತನೆ ನಡೆಸಿದೆ. ನವಭಾರತದ ನಿರ್ಮಾಣ ನವಕರ್ನಾಟಕದ ಬಹುದೊಡ್ಡ ಕೊಡುಗೆ ನೀಡುವ ಗುರಿ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.




