ಬೆಂಗಳೂರು : ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನೋಡು ನೋಡುತ್ತಿದ್ದಂತೆ ಆಕಾಶದ ಎತ್ತರಕ್ಕೆ ಬೆಂಕಿ ಚಿಮ್ಮಿತ್ತು.. ಮಾಲೀಕನ ಹಣ ಬಾಕತನಕ್ಕೆ ಬಡ ವಿದ್ಯಾರ್ಥಿಗಳ, ಕೂಲಿ ಕಾರ್ಮಿಕರ ಜೀವ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದವು..
ಹೌದು, ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮಾಲೀಕನ ನಿರ್ಲಕ್ಷ್ಯತನವೇ ಕಾರಣ ಎಂಬುದು ತಿಳಿದು ಬಂದಿದೆ. ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿಯನ್ನು ಸಂಗ್ರಹಿಸಿದ್ದ ಕಾರಣದಿಂದಲೇ ಬೆಂಕಿ ಅವಘಡ ಸಂಭವಿಸಿದೆ ಎಂಬುದು ಬೆಳಕಿಗೆ ಬಂದಿದೆ.
ಪಟಾಕಿ ಸಂಗ್ರಹಕ್ಕೆ ಬಾಲಾಜಿ ಪಟಾಕಿ ಅಂಗಡಿ ಮಾಲೀಕ ರಾಮಸ್ವಾಮಿರೆಡ್ಡಿ ಲೈಸೆನ್ಸ್ ಪಡೆದಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್ ಗೆ ಮಾತ್ರ ಪರವಾನಿಗೆ ನೀಡಲಾಗಿತ್ತು. ಪ್ರೊಸೆಸಿಂಗ್ ಯೂನಿಟ್ಗೆ 2028ವರೆಗೆ ಪರವಾನಿಗೆ ಇದೆ. ಆದ್ರೆ ಭಾರಿ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ.

“ಇಲ್ಲೀಗಲ್ ಆಗಿ ಗೋಡೌನ್ ನಲ್ಲಿ ಪಟಾಕಿ ತುಂಬಿದ್ದು, ಕನ್ಫರ್ಮ್..”
ಘಟನೆ ಕುರಿತು ಮಾತನಾಡಿದ ಡಿಜಿಪಿ ಕಮಲ್ ಪಂಥ್, ಮೇಲ್ನೋಟಕ್ಕೆ ತಿಳಿದು ಬಂದ ಮಾಹಿತಿ ಪ್ರಕಾರ ಇಲ್ಲೀಗಲ್ ಆಗಿ ಗೋಡೌನ್ ನಲ್ಲಿ ಪಟಾಕಿ ತುಂಬಿದ್ದು ತಿಳಿದು ಬಂದಿದೆ. ಇಲ್ಲೀಗಲ್ ಆಗಿ ಪಟಾಕಿ ಶೇಖರಣೆ ಮಾಡಿಟ್ಟುಕೊಂಡ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಗ್ನಿ ಶಾಮಕ ದಳ ತಪಾಸಣೆ ಮಾಡುವ ವೇಳೆ ೧೪ ಶವ ಪತ್ತೆಯಾಗಿದೆ. ಇಂದು ಆನೆಕಲ್ ಸುತ್ತ ಮುತ್ತ ಎಲ್ಲೆಲ್ಲಿ ಇಲ್ಲೀಗಲ್ ಗೋಡೌನ್ ಮಾಡಿ ಪಟಾಕಿ ಶೇಖರಣೆ ಮಾಡಲಾಗಿದೆ ಅಲ್ಲೆಲ್ಲಾ ತಪಾಸಣೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಮೃತರ ಹಿನ್ನಲೆ ಏನು..?
ತಮಿಳು ನಾಡಿನ ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿಯಿಂದ 10. ಕಾರ್ಮಿಕರು ಬಂದಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಇವರೆಲ್ಲರೂ ವಿದ್ಯಾರ್ಥಿಗಳಾಗಿದ್ದು, ದೀಪಾವಳಿ ಸಂದರ್ಭದಲ್ಲಿ ಈ ರೀತಿ ಕೆಲಸಕ್ಕೆ ಬರುತ್ತಿದ್ದರು ಎಂಬುದು ತಿಳಿದು ಬಂದಿದೆ. ಆದಿಕೇಶವನ್ (17), ಗಿರಿ (17), ವೇಡಪ್ಪನ್ (22), ಆಕಾಶ್ (17), ವಿಜಯರಾಘವನ್(19), ವೆಳಂಬರದಿ (20), ವಿನೋದ್ (18), ಮುನಿವೇಲ್ (19) ಮೃತ ದುರ್ದೈವಿಗಳು. ಇನ್ನು ಘಟನೆ ಸಂಬಂಧ ಬಾಲಾಜಿ ಪಟಾಕಿ ಅಂಗಡಿ ಮಾಲೀಕ ರಾಮಸ್ವಾಮಿರೆಡ್ಡಿ ವಿರುದ್ಧ ಅತ್ತಿಬೆಲೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338, 304ರ ಅಡಿ FIR ದಾಖಲು ಮಾಡಲಾಗಿದೆ.




