Attibele Fire Accident: ಅತ್ತಿಬೆಲೆ ಪಟಾಕಿ ದುರಂತಕ್ಕೆ ಸ್ಥಳೀಯ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ: ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸೆನ್ಸ್ ಕೊಡೋದು, ಅಕ್ರಮ ಶೇಖರಣೆಗೆ ಅವಕಾಶ ಮಾಡಿಕೊಟ್ಟಿದ್ರಿಂದ ಇಷ್ಟು ದೊಡ್ಡ ದುರಂತ ಆಗಿದೆ. ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಇಷ್ಟು ದೊಡ್ಡ ದುರಂತ ಆದ್ರೂ ಸರ್ಕಾರ ಕಣ್ತೆರೆಯದಿದ್ದರೆ ಇನ್ನಷ್ಟು ದುರಂತಗಳು ನಡೆಯಲಿವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಎಚ್ಚರಿಸಿದ್ದಾರೆ..

ಬೆಂಗಳೂರಿನಲ್ಲಿ ಪಟಾಕಿ ದುರಂತದ ಕುರಿತು ಮಾತನಾಡಿದ ಅವರು, ಅತ್ತಿಬೆಲೆ ಪಟಾಕಿ ದುರಂತ ಬಹಳ ದೊಡ್ಡ ಘೋರ, 14 ಜನ ಮೃತಪಟ್ಟಿದ್ದಾರೆ, ಇದು ಆಘಾತಕಾರಿ ವಿಚಾರ. ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಿ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲಿ. ಕಾನೂನಿನಲ್ಲಿ ಪಟಾಕಿಗಳನ್ನ ಇಷ್ಟೊಂದು ಪ್ರಮಾಣದಲ್ಲಿ ಶೇಖರಣೆಗೆ ಅವಕಾಶ ಇಲ್ಲ. ಈ ಒಂದೂವರೆ ತಿಂಗಳಲ್ಲಿ ಎರಡನೇ ಪಟಾಕಿ ದುರಂತ ನಡೆದಿದೆ. ಈ ಮೊದಲು ಹಾವೇರಿಯಲ್ಲಿ ದುರಂತ ನಡೆದು ನಾಲ್ಕು ಜನ ಮೃತಪಟ್ಟಿದ್ರು. ಈಗ ಅತ್ತಿಬೆಲೆಯಲ್ಲಿ 14 ಜನ ಮೃತಪಟ್ಟಿದ್ದಾರೆ. ಅಂದ್ರೆ ನಿಯಮಗಳ ಪಾಲನೆ ಆಗ್ತಿಲ್ಲ ಅಂತ ಇದರಿಂದ ಗೊತ್ತಾಗುತ್ತೆ. ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.

ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತಗೊಂಡ್ರೆ ಇಂಥ ಘಟನೆಗಳು ನಿಲ್ತವೆ. ಕಾನೂನು ಉಲ್ಲಂಘಿಸಿ ಪಟಾಕಿ ಶೇಖರಣೆ ಮಾಡಿಕೊಳ್ಳಲು ಗೋಡೌನ್ ಗೆ ಅಧಿಕಾರಿಗಳ ಅನುಮತಿ ಕೊಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲಿ ಎಂದರು.

ಇದೇ ವೇಳೆ ಮೈತ್ರಿಗೆ ಬಿಜೆಪಿ ವಿರೋದ ವಿಚಾರದ ಕುರಿತು ಮಾತನಾಡಿದ ಅವರು, ಒಟ್ಟಿಗೆ ಕೆಲಸ ಮಾಡಬೇಕೆಂದಾಗ ಕೆಲವು ಸ್ಥಳೀಯ ವಿಚಾರ ಮುನ್ನಲೆಗೆ ಬರುತ್ತೆ. ಈ ವಿಚಾರದಲ್ಲಿ ನಮ್ಮ ನಾಯಕರು ಮಾತಾಡ್ತಾರೆ. ಯಾವುದೇ ಸೀಟು ಹೊಂದಾಣಿಕೆ ಬಗ್ಗೆ ಇನ್ನು ಅಂತಿಮ ಆಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡೇ ತೀರ್ಮಾನ ಮಾಡ್ತಿವಿ ಅಂತ ವರಿಷ್ಠರು ಹೇಳಿದ್ದಾರೆ. ಎಲ್ಲಾ ಹಿರಿಯ ನಾಯಕರು, ಹಾಗೇ ಯಾರಿಗೆಲ್ಲಾ ತೊಂದರೆಯಾಗಿದೆ ಯಾವ ಜಿಲ್ಲೆಗಳಲ್ಲಿ ತೊಂದರೆಯಾಗಿದೆ ಎಂದು ತಿಳಿದು ಅವರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯಗಳಾಗುತ್ತೆ ಎಂದು ತಿಳಿಸಿದರು.

More News