Bigg Boss Season 10: ಬಿಗ್‌ಬಾಸ್ ಸೀಸನ್ ೧೦; ಸದ್ದಿಲ್ಲದೆ ಸ್ಪರ್ಧಿಗಳ ಚಿತ್ರೀಕರಣ?

ಬೆಂಗಳೂರು: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್‌ಬಾಸ್ ಸೀಸನ್ 10’ಕ್ಕೆ ಕ್ಷಣಗಣನೆ ಶುರುವಾಗಿದೆ.
ಈಗಾಗಲೇ ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಚಿತ್ರೀಕರಣವಾಗುತ್ತಿದೆ. ಆದರೆ ಯಾರೆಲ್ಲಾ ಈ ಮನೆಯ ಒಳಗೆ ಪ್ರವೇಶ ಪಡೆದಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಕೆಲ ಸ್ಪರ್ಧಿಗಳ ಪ್ರವೇಶ ಗೌಪ್ಯವಾಗಿಡಲಾಗಿದೆ.

ಈ ರಿಯಾಲಿಟಿ ಶೋ 10ನೇ ಸೀಸನ್ ಆಗಿರುವ ಕಾರಣ ಸಂಥಿಂಗ್ ಸ್ಪೆಷಲ್ ಎಂದಿರುವ ಕಲರ್ಸ್ ಕನ್ನಡ ,ಈ ಸೀಸನ್ ನಲ್ಲಿ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿ ಬದಲು ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ‘ಬಿಗ್ ಬಾಸ್’ ಬೃಹತ್ ಮನೆ ನಿರ್ಮಿಸಿದೆ.ಮೊದಲ ಬಾರಿಗೆ ಅಲ್ಲಿ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಕೆಲ ಬಿಗ್‌ಬಾಸ್ ಸ್ಪರ್ಧಿಗಳ ಹೆಸರುಗಳು ಲೀಕ್ ಆಗಿದೆ ಎನ್ನಲಾಗುತ್ತಿದೆ.

ಚಾರ್ಲಿ ಸಿನಿಮಾ ಖ್ಯಾತಿಯ ಶ್ವಾನ ಚಾರ್ಲಿ ಬಿಗ್‌ಬಾಸ್ ಮನೆಗೆ ಹೋಗುವ ಸುದ್ದಿ ಕೆಲ ದಿನಗಳ ಹಿಂದೆಯೇ ರಿವೀಲ್ ಆಗಿತ್ತು. ಇನ್ನು ಮೈಸೂರಿನ ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಖಚಿತವಾಗಿದೆ. ಇನ್ನು ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ, ‘ಹರ ಹರ ಮಹಾದೇವ್’ ಧಾರಾವಾಹಿ ನಟ ವಿಜಯ್ ಗೌಡ, ಮಂಗಳಮುಖಿ ನೀತು ವನಜಾಕ್ಷಿ ಕೂಡ ಈ ಬಾರಿ ಬಿಗ್‌ಬಾಸ್ ಶೋ ಸ್ಪರ್ಧಿಯಾಗಿದ್ದಾರೆ ಎನ್ನಲಾಗುತ್ತಿದೆ.

ಹಾಸ್ಯ ನಟ ಕೋಮಲ್, ನಿರೂಪಕ ಗೌರೀಶ್ ಅಕ್ಕಿ, ಬಿಗ್‌ಬಾಸ್ ಮಿನಿ ಸೀಸನ್ ಸ್ಪರ್ಧಿ ತ್ರಿವಿಕ್ರಮ್, ರ್ಯಾಪರ್ ಎಶಾನಿ ಒಳಗೊಂಡಂತೆ ಕೆಲವರು ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 8ರ ಭಾನುವಾರ ಸಂಜೆ 6 ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಪ್ರೀಮಿಯರ್ ಆರಂಭವಾಗಲಿದೆ. ಆ ಬಳಿಕ ಸ್ಪರ್ಧಿಗಳ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.
ಅ.೯ ರ ಸೋಮವಾರದಿಂದ ರಾತ್ರಿ ೯.೩೦ ಕ್ಕೆ ಪ್ರಸಾರವಾಗುವ ಈ ಶೋನಲ್ಲಿ 100 ದಿನಗಳ ಕಾಲ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಬಂಧಿಯಾಗಿರುತ್ತಾರೆ. ವಾರಕ್ಕೊಬ್ಬರು ಎಲಿಮಿನೇಟ್ ಆಗುವುದರೊಂದಿಗೆ ಸ್ಪರ್ಧೆಯಲ್ಲಿ ಅಂತಿಮವಾಗಿ ಉಳಿದುಕೊಂಡ ಒಬ್ಬರು ಬಿಗ್‌ಬಾಸ್ ಕನ್ನಡ ಸೀಸನ್ 10 ಟ್ರೋಫಿ ಮುಡಿಗೇರಿಸಿಕೊಳ್ಳಲಿದ್ದಾರೆ.
ವಿನ್ನರ್‌ಗೆ 50 ಲಕ್ಷ ರೂ. ಬಹುಮಾನದ ಹಣ ಸಿಗಲಿದೆ. ರನ್ನರ್ ಅಪ್‌ಗಳಿಗೂ ಬಹುಮಾನಗಳು ಸಿಗಲಿವೆ.

More News