IND v AFG: ಅಫ್ಘಾನ್‌ ಚಾಲೆಂಜ್ ಎದುರಿಸೋಕ್ಕೆ ಭಾರತ ಸಜ್ಜು: ನಾಳೆ ದೆಹಲಿಯಲ್ಲಿ ಮುಖಾಮುಖಿ

ಬೆಂಗಳೂರು: ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇದೀಗ ತನ್ನ ಎರಡನೇ ಬೇಟೆಗೆ ಸಜ್ಜಾಗಿದೆ. ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂಡ್ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಕದನದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ, ನಿರೀಕ್ಷೆಯಂತೆ ಮೊದಲ ಪಂದ್ಯದಲ್ಲಿ ಜಯದ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಇದೀಗ ಅ.11ರಂದು ಅಫ್ಘಾನಿಸ್ತಾನ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮತ್ತೊಂದು ಹೈವೋಲ್ಟೇಜ್ ಹಣಾಹಣಿ ನಡೆಸಲಿದೆ. ಇದಕ್ಕಾಗಿ ಉಭಯ ತಂಡಗಳು ತಮ್ಮದೇ ರಣತಂತ್ರಗಳನ್ನ ರೂಪಿಸಿಕೊಂಡಿದ್ದು, ಜಯದ ನಿರೀಕ್ಷೆಯಲ್ಲಿವೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಕೇವಲ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದರೆ, ಇನ್ನೊಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳು ಕೊನೆಯ ಬಾರಿ 2019ರ ಏಕದಿನ‌ ವಿಶ್ವಕಪ್‌ ಟೂರ್ನಿಯಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರೆ, ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಭಾರತ ತಂಡವನ್ನ ಎದುರಿಸುತ್ತಿರುವ ಅಫ್ಘಾನಿಸ್ತಾನ ಇದೇ ಮೊದಲ ಬಾರಿಗೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುತ್ತಿದೆ. ಇನ್ನೂ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈವರೆಗೂ 21 ಪಂದ್ಯದಲ್ಲಿ ಕಣಕ್ಕಿಳಿದಿದ್ದು ಇದರಲ್ಲಿ 13 ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, 7 ಪಂದ್ಯದಲ್ಲಿ ಸೋಲಿನ‌ ಆಘಾತ ಕಂಡಿದೆ. ಹೀಗಾಗಿ ದೆಹಲಿ ಅಂಗಳದಲ್ಲಿ ಪ್ರಾಬಲ್ಯ ಹೊಂದಿರುವ ಭಾರತ ವಿಶ್ವಕಪ್‌ನ ಮಹತ್ವದ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರ ಹೊಂದಿದೆ.

ಗಿಲ್ ಅಡುವುದು ಡೌಟ್:
ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದ ಶುಭ್ಮನ್ ಗಿಲ್, ಡೆಂಘೀ ಜ್ವರದ ಕಾರಣ
ಮೊದಲ ಪಂದ್ಯದಿಂದ ಹೊರಗುಳಿದಿದ್ಧರು. ಆದರೆ ಎರಡನೇ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಹೊಂದಿರುವ ಆರಂಭಿಕ ಬ್ಯಾಟರ್ ಈವರೆಗೂ ಡೆಂಘೀ ಜ್ವರದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇದು ಭಾರತದ ಬ್ಯಾಟಿಂಗ್ ವಿಭಾಗದ ಬಲವನ್ನ ಇನ್ನಷ್ಟು ಕುಗ್ಗಿಸಿದೆ.

ಪ್ಲೇಯಿಂಗ್ ಇಲವೆನ್ ಕುತೂಹಲ
ಇನ್ನೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲವೆನ್ ಬಗ್ಗೆ ಸಾಕಷ್ಟು ಕುತೂಹಲ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರುಗಳು ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಹೀಗಾಗಿ ಅಫ್ಘಾನ್ ವಿರುದ್ಧದ ಪಂದ್ಯಕ್ಕೆ ಇವರಿಬ್ಬರು ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ದೊಡ್ಡಮಟ್ಟದ ಕುತೂಹಲ ಮೂಡಿಸಿದ್ದು, ಸೂರ್ಯಕುಮಾರ್ ಯಾದವ್ ಅಫ್ಘಾನಿಸ್ತಾನದ ವಿರುದ್ಧ ಆಡಲು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.

More News