ಬೆಂಗಳೂರು : ಹುಬ್ಬಳ್ಳಿ, ಗದಗ, ಹಾವೇರಿ ಭಾಗದ ಪ್ರಬಲ ಮುಖಂಡ ಮಾಜಿ ಶಾಸಕ ರಾಮಪ್ಪ ಲಮಾಣಿ ಬಿಜೆಪಿಗೆ ಗುಡ್ ಬೈ ಹೇಳಿ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷದ ಬಾವುಟ ನೀಡುವುದರ ಮೂಲಕ ಪಕ್ಷಕ್ಕೆ ಸೇರಿಸಿಕೊಂಡರು.

ಉತ್ತರ ಕರ್ನಾಟಕದ ಭಾಗದಲ್ಲಿ ಲಂಬಾಣಿ ಸಮುದಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಗೂ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂಬ ದೃಷ್ಟಿಯಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್, ಪಕ್ಷ ಸೇರ್ಪಡೆ ಸಂಬಂಧ ಇದುವರೆಗೂ 40 ಕ್ಕೂ ಹೆಚ್ಚು ನಾಯಕರ ಅರ್ಜಿ ನಮ್ಮ ಮುಂದಿವೆ, ಅನೇಕರು ಬಿಜೆಪಿ ಜೆಡಿಎಸ್ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ ಎಂದು ತಿಳಿಸಿದರು.
ಆಪ್ ನ 100 ಕ್ಕೂಹೆಚ್ಚು ಅಭ್ಯರ್ಥಿಗಳು ಭೇಟಿ ಮಾಡಿದ್ದಾರೆ, ಅವರೂ ಕಾಂಗ್ರೆಸ್ ಗೆ ಬರಲು ಚರ್ಚಿಸುತ್ತಿದ್ದಾರೆ ಎಂದು ಹೇಳಿದ ಡಿ ಕೆ ಶಿವಕುಮಾರ್, ಸಂಪೂರ್ಣ ಚರ್ಚೆಯ ಬಳಿಕ ಅವರನ್ನು ಪಕ್ಷ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜಕೀಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಜನ ಮನ್ನಣೆ ಗಳಿಸುತ್ತಿರುವ ಪಕ್ಷವಾಗಿದೆ ಎಂದು ತಿಳಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಲ್ಲೂ ಪ್ರಭಾವ ಬೀರುತ್ತಿದೆ ಎಂದರು. ಇದು ಮುಂಬರು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಮೇಲೆ ಪ್ರಬಾವ ಬೀರಲಿದೆ ಎಂದರು.
ಐದು ಗ್ಯಾರೆಂಟಿಗಳನ್ನ ನಾವು ಘೋಷಿಸಿದ್ದೆವು, ನಿರೀಕ್ಷಿಸದ ರೀತಿಯಲ್ಲಿ ಗ್ಯಾರೆಂಟಿ ಈಡೇರಿಸಿದ್ದೇವೆ, ಇದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ, ರಾಜಕೀಯ ದೃವೀಕರಣ ಪ್ರಾರಂಭವಾಗಿದೆ, ಪಂಚ ರಾಜ್ಯಗಳ ಚುನಾವಣೆ ಸೆಮಿಫೈನಲ್, ಲೋಕಸಭೆ ಚುನಾವಣೆ ನಮಗೆ ಫೈನಲ್ ಎಂದು ವಿವರಿಸಿದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ರಾಮಪ್ಪ ಲಮಾಣಿ, ಉತ್ತರ ಕರ್ನಾಟಕ ಭಾಗದ ಮಾಜಿ ಶಾಸಕರಿಗೆ ಜಗದೀಶ್ ಶೆಟ್ಟರ್ ಗಾಳ ಹಾಕಿದ್ದಾರೆ, ಡಿ.ಕೆ.ಶಿವಕುಮಾರ್ ಅವರು ಬಹಳ ಮಂದಿಗೆ ಗಾಳ ಹಾಕಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಪಕ್ಷಕ್ಕೆ ಸೇರಲಿದ್ದಾರೆ. ಬಿಜೆಪಿ ಮುಂದಿನ ದಿನಗಳಲ್ಲಿ ನೆಲ ಕಚ್ಚಲಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ನಾಯಕರು ಯಾರೂ ಇಲ್ಲ ಎಂದು ಟೀಕಿಸಿದ ಅವರು, ಕಳೆದ ಚುನಾವಣೆಯಲ್ಲಿ 40 ಸ್ಥಾನಕ್ಕೆ ಕುಸಿಯುತ್ತಿತ್ತು ಆದರೆ ಕಡಿಮೆ ಅಂತರದಲ್ಲಿ 15-20 ಜನರು ಗೆದ್ದಿದ್ದಾರೆ. ಇದರಿಂದ ಬಿಜೆಪಿ ಇಷ್ಟು ಸೀಟು ಬಂದಿತ್ತು ಎಂದು ಮಾಜಿ ಶಾಸಕ ರಾಮಪ್ಪ ಲಮಾಣಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.




