ಬೆಂಗಳೂರು : ಕಳೆದ ಹಲವು ದಿನಗಳಿಂದ ಐಟಿ ಅಧಿಕಾರಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದು, ಬೆಂಗಳೂರಿನ ಆರ್ ಟಿ ನಗರದ ಎರಡು ಸ್ಥಳದಲ್ಲಿ ನಡೆದ ದಾಳಿಯಲ್ಲಿ ಮಂಚದ ಕೆಳಗೆ ಬೆಂಚಿ ಬೀಳಿಸುವ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಆರ್ ಟಿ ನಗರದ ಇಬ್ಬರು ಗುತ್ತಿಗೆದಾರರ ಮನೆ, ಕಚೇರಿ ಮತ್ತು ಅವರ ಕುಟುಂಬ ವರ್ಗದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 42 ಕೋಟಿ ರೂಪಾಯಿ ಕ್ಯಾಷ್ ಅನ್ನು ಪತ್ತೆ ಹಚ್ಚಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆದ ದಾಳಿ ಸಂದರ್ಭದಲ್ಲಿ ಆತ್ಮಾನಂದ ಕಾಲೋನಿಯ ಪ್ಲ್ಯಾಟ್ ಮೇಲೆ ದಾಳಿ ನಡೆಸಲಾಗಿದೆ.
ಮಂಚದ ಕೆಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಆದರೆ ಪತ್ತೆಯಾದ ನೋಟಿನ ರಾಶಿಯ ಬಾಕ್ಸ್ ಗಳು ಯಾರಿಗೆ ಸೇರಿದ್ದು, ಹಾಗೂ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಾಜಿ ಕಾರ್ಪೋರೇಟರ್ ರೊಬ್ಬರ ನಿವಾಸದ ಮೇಲೂ ದಾಳಿಯಾಗಿದೆ ಎಂದು ಮೂಲಗಳು ತಿಳಿಸಿದ್ದು, ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇವರ ಪತಿ ಬಿಬಿಎಂಪಿ ಗುತ್ತಿಗೆದಾರರಾಗಿದ್ದಾರೆ ಎಂದು ತಿಳಿದುಬಂದಿದ್ದು, ಇವರು ಮಾಜಿ ಶಾಸಕರ ಸಂಬಂಧಿಯೂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.




