ಹುಬ್ಬಳ್ಳಿ : ಪಂಚರಾಜ್ಯ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ 1000 ಕೋಟಿ ಸಂಗ್ರಹ ಮಾಡುತ್ತಿದ್ದಾರೆ ಅನ್ನೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ, ಅವರಿಗೆ ಶೋಭೆ ತರುವಂತದ್ದಲ್ಲ, ಇದು ಬಹಳ ಸೂಕ್ಷ್ಮ ವಿಚಾರ, ಇದಕ್ಕೆ ಎವಿಡೆನ್ಸ್ ಏನಿದೆ ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ತರಾಟೆಗೆ ತೆಗೆದುಕೊಂಡರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆ ಕುಲಗೆಟ್ಟ ಹೋಗಿದೆ, ಕೇಂದ್ರ ಸರ್ಕಾರ ಬಂದ ಮೇಲೆ ಎಷ್ಟು IT ರೇಡ್ ಆಗಿವೆ, ಅದನ್ನು ಇಲ್ಲಿವರೆಗೂ ಬಹಿರಂಗ ಮಾಡಿಲ್ಲ, ನಾಲ್ಕು ದಿನ ಸುದ್ದಿಯಾಗತ್ತೆ, ಮುಂದೆ ಏನು? ಕೊನೆಯ ರಿಜಲ್ಟ್ ಏನ್, ಯಾರಿಗೆ ದಂಡ ಹಾಕೀದ್ದೀರಿ, ಇದನ್ನು ಬಹಿರಂಗ ಮಾಡ್ತೀರಾ ಎಂದು ಇಡೀ ರಾಜಕೀಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಹಣ ಖರ್ಚು ಮಾಡ್ತೀರೀ ಅನ್ನೋ ಪ್ರತಿಪಕ್ಷದವರು ನಿಮಗೆ ಆತ್ಮಸಾಕ್ಷಿ ಇದ್ರೆ ಹೇಳಿ, ಚುನಾವಣೆಗೆ ನೀವು ಹಣ ಖರ್ಚು ಮಾಡಿಲ್ವಾ ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇನ್ನು CBI ತನಿಖೆ ಮಾಡಬೇಕು ಅಂತಾರೆ, ನಮಗೆ ಇದು ಅರ್ಥ ಆಗುತ್ತಿಲ್ಲ, ನೀವೇನು ನೂರಕ್ಕೆ ನೂರರಷ್ಟು ಸತ್ಯ ಹರಿಶ್ಚಂದ್ರರಾ ? ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ರಾಜ್ಯಾಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರು ?
ಪ್ರತಿಭಟನೆ ಮಾಡೋಕೆ ನಿಮಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್, ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೀರಿ ಎಂದು ಪ್ರಶ್ನಿಸಿದರಲ್ಲದೆ, ನಿಮ್ಮ ರಾಜ್ಯಾಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರು, ಯಾಕೆ ಪ್ರತಿಭಟನೆ ಮಾಡ್ತೀರಿ ? ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕಳೆದ ಸರ್ಕಾರದಲ್ಲಿ ಪೇ ಸಿಎಂ ಅಭಿಯಾನ ಆಯ್ತು, ಜನ ನಿಮ್ಮನ್ನ ತಿರಸ್ಕಾರ ಮಾಡಿದ್ರು, ಇದೀಗ ಪ್ರತಿಭಟನೆ ಮಾಡ್ತೀರಿ, ಯಾರ ನೇತೃತ್ವದಲ್ಲಿ ಎಂದು ಪ್ರಶ್ನೆ ಮಾಡಿದ ಜಗದೀಶ್ ಶೆಟ್ಟರ್, ಜನ ತಿರಸ್ಕಾರ ಮಾಡಿ ಮನೆಗೆ ಕಳಸಿದ್ರು, ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಏನು ನೈತಿಕತೆ ಇದೆ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೆ ಹಣ ಸಂಗ್ರಹ ಮಾಡಿದ್ರು ಅಂದುಕೊಳ್ಳಿ, IT ನಿಮ್ಮ ಕಂಟ್ರೋಲ್ ಇದೆ ಬಹಿರಂಗ ಮಾಡಿ, IT ಅವರು ಏನಾದರೂ ಯಾರ ಹಣ ಅಂತಾ ಹೇಳಿದ್ದಾರಾ?, ಇದರಲ್ಲಿ ರಾಜಕಾರಣ ಮಾಡೋದು ಬೇಡ, ರಾಜಕಾರಣಕ್ಕಾಗಿ ಮಾತಾಡ್ತಾರೆ ಅಂದ್ರೆ ರಾಜಕಾರಣ ಕುಲಗೆಟ್ಟು ಹೋಗಿದೆ ಎಂದರು.

ಹೆಸ್ಕಾಂ, ಬೆಸ್ಕಾಂ ಬಿಜೆಪಿ ಸರ್ಕಾರದಲ್ಲೂ ಪ್ರಾಫಿಟ್ ನಲ್ಲಿ ಇರಲಿಲ್ಲ, ಎಲ್ಲ ಸರ್ಕಾದಲ್ಲೂ ಲಾಸ್ ನಲ್ಲಿ ನಡೆಯುತ್ತಿದೆ. ಮಳೆಯಾಗದ ಕಾರಣ ವಿದ್ಯುತ್ ಅಭಾವ ಸಹಜ, ಬೇರೆ ಮಾರ್ಗದಿಂದ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ ಎಂದು ವಿದ್ಯುತ್ ಅಭಾವದ ಕುರಿತು ಸ್ಪಷ್ಟನೆ ನೀಡಿದರು.




