NO LEGAL STATUS FOR SAME SEX MARRIAGE: ಸಲಿಂಗ ವಿವಾಹ: ಕಾನೂನಿನ ಮಾನ್ಯತೆಯಿಲ್ಲ: ಸಲಿಂಗ ವಿವಾಹ ಕಾನೂನು ತರುವ ಜವಾಬ್ದಾರಿ ಸಂಸತ್ತಿನದ್ದು: ಸುಪ್ರೀಂಕೋರ್ಟ್

ನವದೆಹಲಿ : ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋಟ್ ಇಂದು ಸ್ಪಷ್ಟಪಡಿಸಿದೆ. ಹಾಗೆಯೇ ಸಂವಿಧಾನ ಪೀಠಕ್ಕೆ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ.
ವಿಶೇಷ ವಿವಾಹ ಕಾಯಿದೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ, ಅದನ್ನು ನಾವು ವ್ಯಾಖ್ಯಾನಿಸಬಹುದು. ಆದರೆ, ಅದನ್ನು ಬದಲಾಯಿಸುವುದು ಸಂಸತ್ತು, ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಮತ್ತು ಹಿಮಾ ಕೊಯ್ಲಿ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗ ವಿವಾಹದ ಕುರಿತು ಮಹತ್ವದ ತೀರ್ಪು ನೀಡಿದ್ದಾರೆ.
ಆದರೆ ಈ ಸಮುದಾಯ ತಮ್ಮ ಬದುಕು ಸಾಗಿಸುವಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳದ್ದು ಎಂದು ನ್ಯಾಯಪೀಠ ಸೂಚಿಸಿದೆ.
ನಿರ್ಣಾಯಕ ವಿಷಯದ ಕುರಿತು ತೀರ್ಪು ನೀಡಿದ ಸಿಜೆಐ, ವಿಶೇಷ ವಿವಾಹ ಕಾಯ್ದೆಯ ಆಡಳಿತದಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಸಂಸತ್ತು ನಿರ್ಧರಿಸುತ್ತದೆ ಎಂದು ಹೇಳಿದರು. ನ್ಯಾಯಾಲಯವು ಕಾನೂನನ್ನು ಮಾಡಲು ಸಾಧ್ಯವಿಲ್ಲ, ಅದು ಅದನ್ನು ವ್ಯಾಖ್ಯಾನಿಸಬಹುದಷ್ಟೆ, ಅದನ್ನು ಜಾರಿಗೆ ತರುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.

More News