ಮೈಸೂರು : ಸಿಂಧಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಹರ್ಷ ವ್ಯಕ್ತ ಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ನಲ್ಲಿ ಅನುಭವಿಸಿರುವ ಸೋಲನ್ನು ಗಂಭೀರವಾಗಿ ಪರಿಗಣಿಸಿ ಸೋಲನ್ನು ಗೆಲುವಾಗಿ ಪರಿವರ್ತನೆ ಮಾಡಿ ಕೊಳ್ಳಲಾಗುವುದು ಎಂದು ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಉಪಚುನಾವಣೆಯ ಫಲಿತಾಂಶದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂಧಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ನಮ್ಮ ಮತದಾರರಿಗೆ ಹಾಗೂ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಾನಗಲ್‌ನಲ್ಲಿ ನಮ್ಮ ನಿರೀಕ್ಷೆ ಮಟ್ಟಕ್ಕೆ ಮತಗಳು ದೊರೆತಿಲ್ಲ. ಮುಖ್ಯವಾಗಿ ಹಿರಿಯರಾದ ಸಿ.ಎಂ ಉದಾಸಿಯವರಿಗಿದ್ದ ಬೆಂಬಲವನ್ನು ನಾವು ಪಡೆಯಲು ಸಾಧ್ಯವಾಗಿಲ್ಲ. ಪಕ್ಷದ ಹಿರಿಯರು, ನಾಯಕರು ಹಾಗೂ ಪದಾಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ನುಡಿದರು.
ಸಿಂಧಗಿ ಫಲಿತಾಂಶಕ್ಕೆ ಹಣ ಹಂಚಿಕೆ ಕಾರಣ
ಸಿಂಧಗಿಯ ಫಲಿತಾಂಶಕ್ಕೆ ಹಣ ಹಂಚಿಕೆ ಕಾರಣ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸೋತವರದ್ದು ಸಾಮಾನ್ಯವಾಗಿ ಒಂದೇ ಮಾದರಿಯ ಅನಿಸಿಕೆ ಇರುತ್ತದೆ, ಹಣಬಲ ತೋಳ್ಬಲ ಎನ್ನುತ್ತಾರೆ. ಜನಬೆಂಬಲ ಇಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದರು. ಸಾರ್ವತ್ರಿಕ ಚುನಾವಣೆಗೆ ಪಕ್ಷ ಎಲ್ಲ ರೀತಿಯ ಸಿದ್ಧತೆಮಾಡಿಕೊಳ್ಳುತ್ತದೆ. ಸಿಂಧಗಿಯಲ್ಲಿ ಗೆದ್ದಿದ್ದೇವೆ. ಗೆಲುವನ್ನು ಪರಿಗಣಿಸಿದಂತೆಯೇ ಸೋಲನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಚುನಾವಣೆಯಲ್ಲಿ ನಾನು ಸಹಕಾರ ಕೇಳಿದ್ದವರೆಲ್ಲರೂ, ನನಗೆ ಸಹಕಾರ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ವಿ.ಸಿ.ನಾಲೆ ಸಂಪೂರ್ಣ ಆಧುನೀಕರಣಕ್ಕೆ ಕ್ರಮ
ವಿ.ಸಿ.ನಾಲೆಯ ಸಂಪೂರ್ಣವಾಗಿ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದರು, ೫೦೦ ಕೋಟಿ ರೂ.ಗಳ ವೆಚ್ಚದಲ್ಲಿ ನಾಲೆ ಆಧುನಿಕರಣ ಕಾರ್ಯವನ್ನು ಈಗಾಗಲೇ ಸರ್ಕಾರ ಪ್ರಾರಂಭಮಾಡಿದೆ. ೧೬೦೦ ಕಿ.ಮಿ.ವರೆಗೆ ಆಗಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದೆಂದು ಭರವಸೆ ನೀಡಿದರು.
ಕಟ್ಟೆ ನಾಲೆಗಳ ಆಧುನೀಕರಣ, ಆದರೆ ಮಂಡ್ಯ ಮೈಸೂರು ಭಾಗದ ನೀರಾವರಿ ಪ್ರದೇಶಕ್ಕೆ ಪ್ರಯೋಜನವಾಗಲಿದೆ. ಯೋಜನೆಯ ಹಿಂದೆ ಯೋಚನೆ ಇರಬೇಕು ಎಂದ ಮುಖ್ಯಮಂತ್ರಿಗಳು, ನವೆಂಬರ್ ತಿಂಗಳಲ್ಲಿ ಅಣೆಕಟ್ಟೆ ತುಂಬಿರುವುದು ಅಪರೂಪದ ಸಂದರ್ಭ ಎಂದು ಬಣ್ಣಿಸಿದರು.
ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುವುದು
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ತಮಿಳುನಾಡು ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ. ಕಾನೂನಾತ್ಮಕವಾಗಿ ಸಿ.ಡಬ್ಯು.ಸಿ ಹಾಗೂ ಕಾವೇರಿ ನದಿ ಪ್ರಾಧಿಕಾರದಲ್ಲಿ ನಮ್ಮ ಪಾತ್ರದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧರಾಗಿದ್ದೇವೆ. ಕಾವೇರಿ ಟ್ರಿಬ್ಯೂನಲ್ ಆದೇಶದ ಅನ್ವಯ ತಮಿಳುನಾಡಿಗೆ ನೀರನ್ನು ಕೊಟ್ಟು ಹೆಚ್ಚಿನ ನೀರನ್ನು ಸಂಗ್ರಹ ಮಾಡಿ ಕುಡಿಯುವ ನೀರು, ಸಂಕಷ್ಟದ ವೇಳೆಯಲ್ಲಿ ಎರಡೂ ರಾಜ್ಯಗಳು ನೀರನ್ನು ಬಳಕೆ ಮಾಡಬಹುದಾದ ಈ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದರು.
ಕೆ.ಆರ್.ಎಸ್ ಆಧುನೀಕರಣ
ಕೆ.ಆರ್.ಎಸ್ ಗೆ ಒಂದು ಇತಿಹಾಸವಿದೆ. ಅಂದಿನ ನಾಲ್ವಡಿ ಕೃಷಣರಾಜ ಒಡೆಯರ್ ಮತ್ತು ಆಡಳಿತಗಾರರ ಸರ್.ಎಂ.ವಿಶ್ವೇಶ್ವರಯ್ಯ ಅವರು ಮನಸ್ಸು ಮಾಡದೇ ಹೋದಿದ್ದರೆ, ಮಂಡ್ಯ ಮೈಸೂರು ಕ್ಷೃಷಿಯಲ್ಲಿ ಮುಂದುವರೆಯಲು ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಕೆ.ಆರ್.ಎಸ್ ಅಣೆಕಟ್ಟನ್ನು ಬರುವ ೧೦೦ ವರ್ಷಕ್ಕೆ ಬಳಕೆಯಾಗಬೇಕಾದರೆ ಇದರ ರಕ್ಷಣೆ ಮತ್ತು ಸಂಪೂರ್ಣ ಆಧುನೀಕರಣ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಿಗದಿತ ಅವಧಿಗೆ ಮುನ್ನವೇ ಕಾಮಗಾರಿ ಪೂರ್ಣಗೊಳಿಸಿ ಅಣೆಕಟ್ಟು ಸುರಕ್ಷತೆಯಿಂದಿರಬೇಕಾದರೆ ಗೇಟುಗಳು ಸುಭದ್ರವಾಗಿರಬೇಕು. ಪ್ರಸ್ತುತ ೧೩೬ ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ನಿಗದಿತ ಅವಧಿಗೆ ಮುನ್ನವೇ ಪೂರ್ಣಗೊಳಿಸಿ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜಿನಿಯರ್‌ಗಳಿಗೆ ಸಾರ್ವಜನಿಕವಾಗಿ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಕಬಿನಿಗೂ ಸಿಎಂರಿಂದ ಬಾಗಿನ ಅರ್ಪಣೆ
ನವೆಂಬರ್ ತಿಂಗಳಲ್ಲಿ ಕೆ.ಆರ್.ಎಸ್ ಮತ್ತು ಕಬಿನಿ ತುಂಬಿರುವುದು ಅಪರೂಪ. ಜಲಾಶಯಗಳು ತುಂಬಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಅಂತರ ರಾಜ್ಯ ಜಲಾಶಯವಾಗಿದ್ದು, ಈ ಸಂದರ್ಭದಲ್ಲಿ ಕೊರತೆಯಾಗುತ್ತಿತ್ತು. ನಾಲೆ ಮತ್ತು ತಮಿಳುನಾಡಿಗೆ ನೀರು ಬಿಡಲು ತೊಂದರೆಯಾಗುವುದಿಲ್ಲ. ಯಾವಾಗ, ಎಷ್ಟು ಬಿಡುಗಡೆ ಮಾಡಬೇಕೆನ್ನುವುದು ಸಮಿತಿಗಳಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಬೃಂದಾವನ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ಬಗ್ಗೆ ಪ್ರಸ್ತಾವನೆ ಇದೆ. ನೀತಿಯನ್ನು ಅನುಸರಿಸಬೇಕಾದೆ. ಸರ್ಕಾರದ ವತಿಯಿಂದ ಕೈಗೊಳ್ಳಬೇಕೋ ಅಥವಾ ಖಾಸಗಿಯವರಿಗೆ ವಹಿಸಬೇಕೋ ಎಂಬ ಬಗ್ಗೆ ಗೊಂದಲವಿದೆ. ಈ ಬಗ್ಗೆ ಆದಷ್ಟು ಬೇಗ ನಿರ್ಧಾರಕ್ಕೆ ಬರಲಾಗುವುದು ಎಂದರು.




