ನವದೆಹಲಿ : ಕಾವೇರಿ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿ ಸಂಕಷ್ಟ ಸೂತ್ರ ರಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿತು.
ಕನ್ನಡ ಧ್ವಜ ಹಾಕಿಕೊಂಡು ನೂರಾರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ, ಕಾವೇರಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು.
ಕರವೇ ನಾರಾಯಣಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇಯ ನೂರಾರು ಕಾರ್ಯಕರ್ತರು ಪಾಲ್ಗೊಂಡು ಧರಣಿ ನಡೆಸಿದರು. ಮಧ್ಯಾಹ್ನ ಒಂದು ಗಂಟೆಯವರಗೂ ಧರಣಿ ನಡೆಸಲಿರುವ ಕರವೆ, ನಂತರ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಲಿದೆ.
ಪ್ರಧಾನ ಮಂತ್ರಿ ಕಚೇರಿಯಿಂದ ಕೇವಲ ಇಬ್ಬರಿಗೆ ಮಾತ್ರ ಪ್ರಧಾನಿ ಭೇಟಿಗೆ ಅವಕಾಶ ನೀಡಲಾಗಿದ್ದು, ಕರವೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮತ್ತು ದೆಹಲಿ ಕನ್ನಡ ಸಂಘಧ ಅಧ್ಯಕ್ಷ ನಾಗರಾಜ್ ಗೆ ಮಾತ್ರ ಪ್ರಧಾನಿ ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸಂಕಷ್ಟ ಸೂತ್ರ ಜಾರಿಮಾಡುವಂತೆ ಆಗ್ರಹಿಸಲಿದ್ದಾರೆ.

ಕಾರಾಣಾಂತರಗಳಿಂದ ಪ್ರಧಾನಿ ಭೇಟಿ ಸಮಯ ಮುಂದೂಡಿಕೆ
ಇಂದು ಮಧ್ಯಾಹ್ನ ಕರವೆ ಮುಖಂಡರ ಪ್ರಧಾನಿ ಭೇಟಿ ಮುಂದೂಡಲಾಗಿದೆ. ಪ್ರಧಾನಮಂತ್ರಿ ಕಚೇರಿಯಿಂದ ಇಂದು ಭೇಟಿಯಿಲ್ಲ ನಾಳೆ ಪ್ರಧಾನಿಯವರು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

ಕರವೇಯಿಂದ ಪ್ರಹ್ಲಾದ್ ಜೋಶಿ ಭೇಟಿ
ನವದೆಹಲಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ನಾರಾಯಣಗೌಡ ಮತ್ತು ಕಾರ್ಯಕರ್ತರು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿ, ಕಾವೇರಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದರು.
ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಲು ಸನ್ನದ್ದವಾಗಿದೆ, ಆದರೆ, ಕಾವೇರಿ ವಿಚಾರದಲ್ಲಿ ರಾಜಕೀಯ ಸಮಸ್ಯೆ ಇದೆ ಎಂದು ತಿಳಿಸಿದರಲ್ಲದೆ, ಡಿಸಿಎಂ ಡಿಕೆಶಿವಕುಮಾರ್ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಸಂಬಂಧ ಉತ್ತಮವಾಗಿದೆ, ಸ್ಟಾಲಿನ್ ಅವರ ಡಿಎಂಕೆ ಪಕ್ಷ ಕಾಂಗ್ರೆಸ್ ನ ಇಂಡಿಯಾ ಒಕ್ಕೂಟದಲ್ಲಿದೆ, ರಾಹುಲ್ ಗಾಂಧಿಯನ್ನು ಸೇರಿಸಿಕೊಂಡು ಕುಳಿತು ಮಾತನಾಡಲಿ ಎಂದು ಸಲಹೆ ನೀಡಿದರು.
ನಂತರ ಭಾರತ ಸರ್ಕಾರದಿಂದ ಏನು ಮಾಡಬೇಕೋ ಅದನ್ನ ನಾವು ಮಾಡುತ್ತೇವೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ ಸಂದರ್ಭದಲ್ಲಿ ಕೇಂದ್ರ ಸಚಿವರು ಇಂತಹ ಸಲಹೆ ನೀಡಿ ಕಳುಹಿಸಿದ್ದಾರೆ.




