ಬೆಂಗಳೂರು : ಇಲ್ಲಿನ ಕೋರಮಂಗಲ ಫೋರಂ ಮಾಲ್ ಸಮೀಪ ಇರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಪಬ್ ವೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಕಟ್ಟಡದ ಐದನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಕೆಲಸ ಮಾಡುವ ಸಿಬ್ಬಂದಿ ಪಾರಾಗಿದ್ದಾರೆ. ಆದರೆ ಯುವಕನೋರ್ವ ಐದನೇ ಅಂತಸ್ತಿನಿಂದ ಜಿಗಿದಿದ್ದಾನೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಬೆಂಕಿಯಿಂದ ಕಟ್ಟಡದ ಮೇಲಂತಸ್ತು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿ ಅವಘಡದಿಂದ ಸುತ್ತಮುತ್ತ ದಟ್ಟ ಹೊಗೆ ಆವರಿಸಿತ್ತು, ಅಗ್ನಿ ಶಾಮಕದಳ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಅಕ್ಕಪಕ್ಕ ಕಟ್ಟಡಗಳಿಗೆ ಹರಡುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.

ಕಟ್ಟಡದ ಐದನೇ ಅಂತಸ್ತಿನಲ್ಲಿ ಮಡಜ್ ಪೈಪ್ ಎಂಬ ಪಬ್ ನಡೆಸಲಾಗುತ್ತಿತ್ತು. ಅಡುಗೆ ಮಾಡಲು ಅಡುಗೆ ಮನೆಗೆ ಹೋದಾಗ ಬೆಂಕಿ ಕಾಣಿಸಿಕೊಂಡಿದೆ. ಗ್ಯಾಸ್ ಸಿಲಿಂಡರ್ ವೊಂದು ಸ್ಪೋಟಗೊಂಡು ಇಡೀ ಕಟ್ಟಕ್ಕೆ ಬೆಂಕಿ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಬ್ ಮಧ್ಯಾಹ್ನ 12ರ ಬಳಿಕ ತೆರೆಯುತ್ತಿದ್ದ ಹಿನ್ನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.




