ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ ಕಮಿಷನ್ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಎಟಿಎಮ್ ಸರ್ಕಾರದ ಕಲೆಕ್ಷನ್ ವಂಶಾವಳಿ ಎಂಬ ಫೋಸ್ಟರ್ ಅನ್ನು ಮಾಜಿ ಸಿಎಂ ಸದಾನಂದಗೌಡ ಬಿಡುಗಡೆಗೊಳಿಸಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹೋರಾಟದ ಕುರಿತ ಫೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಕಲೆಕ್ಷನ್ ಕೇಂದ್ರ ಬಿಂದು ರಾಹುಲ್ ಗಾಂಧಿವಾಗಿದ್ದಾರೆ, ಕಲೆಕ್ಷನ್ ನಲ್ಲೂ ಪೈಪೋಟಿ ಶುರುವಾಗಿದೆ, ಸಿಎಂ ಹಾಗೂ ಡಿಸಿಎಂ ನಡುವೆ ಕಲೆಕ್ಷನ್ ಫೈಟ್ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಕುರ್ಚಿಗಾಗಿ ಇಬ್ಬರು ಕಲೆಕ್ಷನ್ ಪೈಪೋಟಿಗಿಳಿದಿದ್ದಾರೆ, ಕಲೆಕ್ಷನ್ ವಂಶವೃಕ್ಷದ ಬಗ್ಗೆ ಫೋಸ್ಟರ್ ಬಿಡುಗಡೆ ಮಾಡಿದ್ದೇವೆ, ಸಿಎಂರಿಂದ ಕಲೆಕ್ಷನ್ ಆದ ಹಣ ಸುರ್ಜೇವಾಲರಿಂದ ಹೈಕಮಾಂಡ್ ಗೆ ಹೋಗುತ್ತಿದೆ, ಡಿಸಿಎಂರಿಂದ ಕಲೆಕ್ಷನ್ ಆದ ಹಣ ಕೆ ಸಿ ವೇಣುಗೋಪಾಲ್ ರಿಂದ ಹೈಕಮಾಂಡ್ ಗೆ ಹೋಗುತ್ತಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಮಗ, ಹಾಗೂ ಅವರ ಸ್ವಜಾತಿ ಸಚಿವ ಭೈರತಿ ಸುರೇಶ್ ರಿಂದ ವಸೂಲಿ, ರಾಮಯ್ಯ ಮತ್ತು ಕೆಂಪಣ್ಣರ ಮೂಲಕ ಹಣ ವಸೂಲಿ, ಇನ್ನೊಂದು ತಂಡ ಗುತ್ತಿಗೆದಾರರ ಉಪಾಧ್ಯಕ್ಷರ ತಂಡದಿಂದ ವಸೂಲಿ ನಡೆಯುತ್ತಿದೆ ಎಂದರು.

ಇದು ಖಜಾನೆ ಖಾಲಿ ಮಾಡುವ ವ್ಯವಸ್ಥೆ ಆಗಿದೆ, ಐದು ತಿಂಗಳಾದ್ರು ಸರ್ಕಾರದಿಂದ ಹೊಸ ಕೆಲಸಗಳನ್ನು ಪ್ರಾರಂಭ ಮಾಡಿಲ್ಲ, ಡಿ ಕೆ ಶಿವಕುಮಾರ್ ಅವರು ಬೆಳಗಾವಿಗೆ ಕಲೆಕ್ಷನ್ ಮಾಡೋಕೆ ಹೋಗಿದ್ರು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಡಿ ಕೆ ಶಿವಕುಮಾರ್ ಮಂತ್ರಿಯಾಗಿ ಮುಂದುವರೆಯುವ ನೈತಿಕತೆಯಿಲ್ಲ
ಹೈಕೋರ್ಟಿನ ಆದೇಶದಂತೆ ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ಮುಂದುವರಿಯಲು ನೈತಿಕತೆ ಇಲ್ಲ, ತಕ್ಷಣ ಡಿಸಿಎಂ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು, ತನಿಖೆ ಮುಗಿಯುವವರೆಗೂ ಅವರು ಯಾವುದೇ ಪದವಿಯಲ್ಲಿರಬಾರದು ಎಂದು ಆಗ್ರಹಿಸಿದರು. ಅವರು ಸರ್ಕಾರದಲ್ಲಿ ಮುಂದುವರಿದ್ರೆ ಅಧಿಕಾರಿಗಳ ಮೂಲಕ ತನಿಖೆಯ ಮೇಲೆ ಪ್ರಭಾವ ಬೀರುವಂತಾಗುತ್ತದೆ ಎಂದರು.




