ಬೆಳಗಾವಿ: ಗೋವಾದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯ ಮೇಲೆ ತಾಲ್ಲೂಕಿನ ಪೀರನವಾಡಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಭಾನುವಾರ ನಸುಕಿನ ಜಾವ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 21 ವಿವಿಧ ಬ್ರ್ಯಾಂಡ್‌ಗಳ ₹43.93 ಲಕ್ಷ ಮೌಲ್ಯದ ಮದ್ಯ, ₹20 ಲಕ್ಷ ಮೌಲ್ಯದ ವಾಹನ ಸೇರಿದಂತೆ ₹63.93 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಹೆಚ್ಚುವರಿ ಅಬಕಾರಿ ಆಯುಕ್ತ ಡಾ.ವೈ.ಮಂಜುನಾಥ, ‘ಗೋವಾ ಮದ್ಯವನ್ನು 250 ಬಾಕ್ಸ್‌ಗಳಲ್ಲಿ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಮದ್ಯದ ಬಾಕ್ಸ್‌ಗಳ ಮೇಲೆ ಖಾಲಿ ರಟ್ಟಿನ ಬಾಕ್ಸ್ ಹಾಗೂ ಪೇಪರ್ ಹಾಕಲಾಗಿತ್ತು. ನಾವು ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಿಗ್ಗೆ 3.30ಕ್ಕೆ ದಾಳಿ ನಡೆಸಿ, ಪ್ರಕರಣ ಭೇದಿಸಿದ್ದೇವೆ. ಚಾಲಕ ಪರಾರಿಯಾಗಿದ್ದು, ತನಿಖೆ ಮುಂದುವರಿಸಿದ್ದೇವೆ’ ಎಂದರು.

‘ಈ ಹಿಂದೆ ಪ್ಲೈವುಡ್ ಮತ್ತು ವಿದ್ಯುತ್ ಪರಿವರ್ತಕಗಳ ಮಧ್ಯೆ ಬಚ್ಚಿಟ್ಟು ಅಕ್ರಮ ಮದ್ಯ ಸಾಗಿಸಲಾಗುತ್ತಿತ್ತು. ಅವೆರಡೂ ಪ್ರಕರಣಗಳಿಗಿಂತ ಇದು ವಿಶೇಷ ಪ್ರಕರಣವಾಗಿದೆ. ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಈ ಬಾರಿ ಸಾಗಿಸಲಾಗುತ್ತಿತ್ತು’ ಎಂದು ಹೇಳಿದರು.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಿರೋಜ್‌ಖಾನ್ ಕಿಲ್ಲೇದಾರ, ಉಪ ಆಯುಕ್ತ ಎಂ.ವನಜಾಕ್ಷಿ, ಅಧೀಕ್ಷಕ ವಿಜಯ ಹಿರೇಮಠ ಮಾರ್ಗದರ್ಶನದಲ್ಲಿ ಬೆಳಗಾವಿ ಉಪವಿಭಾಗದ ಉಪ ಅಧೀಕ್ಷಕ ರವಿ ಮುರುಗೋಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.




