ಬೆಂಗಳೂರು : ನಮ್ಮ ವರಿಷ್ಠರು ಪಂಚ ರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಲ್ಲಿದ್ದಾರೆ, ನಮ್ಮ ಮೊದಲ ಆದ್ಯತೆ ಪಂಚ ರಾಜ್ಯಗಳನ್ನು ಗೆಲ್ಲೋದು, ನಂತರ ರಾಜ್ಯದಲ್ಲಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಎಲ್ಲಾ ಮುಗಿದ ನಂತರ ಹೈಕಮಾಂಡ್ ಯಾರನ್ನೇ ನೇಮಕ ಮಾಡಿದರೂ ನಾವು ಅದನ್ನು ಸ್ವಾಗತಿಸುತ್ತೇವೆ ಎಂದರು. ಇದರಲ್ಲಿ ಜಾತಿ, ಸಮುದಾಯ ಅಂತ ಇಲ್ಲ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಎಂಬ ಸಮಜಾಯಿಸಿ ಉತ್ತರ ನೀಡಲು ಪ್ರಯತ್ನಿಸಿದರು.
ಕನಕಪುರವನ್ನ ಜಿಲ್ಲೆಯನ್ನಾಗಿ ಮಾಡಿಬಿಡಿ
ಬೆಂಗಳೂರು ನಗರಕ್ಕೆ ಈಗಾಗಲೇ ಸರಿಯಾಗಿ ಕಾವೇರಿ ನೀರು, ಒಳ ಚರಂಡಿ, ಸ್ಟ್ರೀಟ್ ಲೈಟ್ ಕೊಡಲು ಸಾಧ್ಯವಾಗಿಲ್ಲ, ಈ ಸಂಬಂಧ ಹೋರಾಟಗಳು ನಡೆಯುತ್ತಿವೆ. ಈಗ ಕನಕಪುರವನ್ನ ಬೆಂಗಳೂರಿಗೆ ಸೇರಿಸುತ್ತೇನೆ ಎಂದು ಡಿಸಿಎಂ ಹೇಳಿದ್ದಾರೆ, ಹಾಗಾದ್ರೆ ರಾಮನಗರದ ಪಾಡೇನು, ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಬಾರ್ಡರ್‌ನಲ್ಲಿ ಹೊಸೂರು ಇದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ನಿಮ್ಮ ಸ್ನೇಹಿತರು. ಆದ್ದರಿಂದ ಸ್ಟಾಲಿನ್ ಜೊತೆ ಮಾತಾಡಿ ಹೊಸೂರನ್ನೂ ಬೆಂಗಳೂರಿಗೆ ಸೇರಿಸಿಬಿಡಿ. ಹಾಗೆಯೇ ಬೆಂಗಳೂರನ್ನ ಹೇಗೆಲ್ಲಾ ಹಾಳು ಮಾಡಬೇಕೋ ಮಾಡಿಬಿಡಿ ಎಂದು ಆರೋಪಿಸಿದರು.
ರಿಪಬ್ಲಿಕ್ ಕನಕಪುರ ಎಂದು ಮಾಡಿ ಎಂದು ಸಲಹೆ ನೀಡಿದ ಅಶೋಕ್, ಹಿಂದೆ ಬಳ್ಳಾರಿಗೆ ರಿಪಬ್ಲಿಕ್ ಬಳ್ಳಾರಿ ಅಂತ ಹೇಳ್ತಿದ್ರು, ಈಗ ನಿಮ್ಮ ಸಿಎಂ ಏನು ಹೇಳ್ತಾರೆ.? ಎಂದು ಪ್ರಶ್ನಿಸಿದರು. ಡಿಕೆ ಶಿವಕುಮಾರ್ ಅವರ ನಿರ್ಧಾರಕ್ಕೆ ಸಿಎಂ ಬೆಂಬಲ ಇದೆಯಾ ಅನ್ನೋದನ್ನು ಸ್ಪಷ್ಟಪಡಿಸಬೇಕು ಎಂದರು.
ಕನಕಪುರ ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಯಾವುದೇ ಹೋರಾಟವು ಇಲ್ಲ. ಕೇವಲ ಒಬ್ಬರ ಹಿತಾಸಕ್ತಿಗಾಗಿ ಇದನ್ನು ರಚಿಸಲು ಹೊರಟಿದ್ದಾರೆ ಎಂದರು. ಈಗಾಗಲೇ ಬೆಂಗಳೂರು ಹಾಳು ಬಿದ್ದಿದೆ. ಇದರ ಜೊತೆ ಕನಕಪುರ, ಮಾಗಡಿ, ದೇವನಹಳ್ಳಿ ಎಲ್ಲಾ ಸೇರಿಸಿ ಹಾಳು ಮಾಡಿ. ರಿಯಲ್ ಎಸ್ಟೇಟ್ ಕೂಡ ಮಾಡಿ ಎಂದರು.




