BJP MLA GIVEN RELIGIOUS TOUCH: ಹುಲಿ ಉಗುರು ಪ್ರಕರಣಕ್ಕೆ ಧರ್ಮದ ಟಚ್ ಕೊಟ್ಟ ಬಿಜೆಪಿ ಶಾಸಕ: ಮಸೀದಿಗಳಲ್ಲಿರುವ ನವಿಲುಗರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಬೆಂಗಳೂರು : ಹುಲಿ ಉಗುರು ಪ್ರಕರಣಕ್ಕೆ ಧರ್ಮದ ಟಚ್ ಕೊಟ್ಟ ಬಿಜೆಪಿ ಶಾಸಕ, ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ, ಮುಸ್ಲಿಂ ದರ್ಗಾಗಳಲ್ಲಿರುವ ನವಿಲುಗರಿಗಳ ವಿರುದ್ಧ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಕಾನೂನಿನಲ್ಲಿ ಎಲ್ಲರಿಗೂ ಸಮಾನವಾಗಿರಬೇಕು, ಮುಸ್ಲಿಂ ದರ್ಗಾಗಳಲ್ಲಿ ನವಿಲುಗರಿಗಳನ್ನು ಬಳಕೆ ಮಾಡುತ್ತಾರೆ, ಇದು ಕೂಡಾ ಕಾನೂನಿಗೆ ವಿರುದ್ಧವಾಗಿದ್ದು, ದರ್ಗಾಗಳ ಮೇಲೂ ಕ್ರಮ ತಗೊಳ್ಳುವಂತಾಗಲಿ, ಕೇವಲ ಹಿಂದೂ ಧರ್ಮ ಟಾರ್ಗೇಟ್ ಮಾಡಿ ಕೇಸ್ ಹಾಕುವಂತಾಗಬಾರದು ಎಂದು ಆಗ್ರಹಿಸಿದ್ದಾರೆ.
ಮುಸ್ಲಿಂ ಮೌಲ್ವಿಗಳ ವಿರುದ್ಧ ರೇಡ್ ಮಾಡಿ ಕೇಸನ್ನು ಹಾಕಬೇಕು ಎಂದು ಆಗ್ರಹಿಸಿದ ಅವರು, ಎಲ್ಲ ಮೌಲ್ವಿಗಳಿಗೂ ಏಳೇಳು ವರ್ಷ ಜೈಲು ಶಿಕ್ಷೆ ಕೊಡಿ, ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತೆ, ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ, ಈ ಸಂಬಂಧ ಸರ್ಕಾರಕ್ಕೆ ನಾವು ಪತ್ರ ಬರೆದು ಆಗ್ರಹಿಸುತ್ತೇವೆ ಎಂದರು.
ಸತ್ತ ಪ್ರಾಣಿಗಳ ಚರ್ಮ ಇಟ್ಕೊಳ್ಳೋದು ನಮ್ಮ ಸಾಧು ಸಂತರು ಮೊದಲಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ, ಸಲ್ಮಾನ್ ಖಾನ್ ಥರ ಜಿಂಕೆ ಸಾಯಿಸಿ ಅದರ ಚರ್ಮ ಬಳಸಲ್ಲ, ಕಾನೂನು ಪಾಲಿಸಿದರೆ 100% ಪಾಲಿಸಿ, ಕಾನೂನು ಕೇವಲ ಹಿಂದೂ ಸಮಾಜಕ್ಕೆ ಅನ್ವಯಿಸಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದರು.
ರಾಜ್ಯದಲ್ಲಿ ಬರ ಇದೆ, ರೈತರಿಗೆ, ಜನರು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಇದರ ಗಮನ ಬೇರೆ ಕಡೆ ಸೆಳೆಯಲು ಸರ್ಕಾರ ಹುಲಿ ಉಗುರು ಪ್ರಕರಣ ಮುನ್ನೆಲೆಗೆ ತಂದಿದೆ ಎಂದು ಆರೋಪಿಸಿದ ಅವರು, ಯಾರೂ ನಿಜವಾದ ಹುಲಿಗಳಿಂದ ಉಗುರು ತಂದು ಹಾಕ್ಕೊಂಡಿರಲ್ಲ, ಆಂತ ಶೂರರು ಯಾರೂ ಇಲ್ಲ ಎಂದ ಅವರು, ಸತ್ತ ಹುಲಿಗಳಿಂದ ಉಗುರು ತಂದು ಹಾಕ್ಕೊಂಡಿರಬಹುದು ಎಂದರು.
ಪ್ರತ್ಯೇಕ ಜಿಲ್ಲೆ ಬದಲು ಕರ್ನಾಟಕ ಕ್ಯಾಪಿಟಲ್ ರೀಜನ್(ಕೆಸಿಆರ್) ಮಾಡಲಿ
ರಾಮನಗರ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ ಮಾಡುವ ಬದಲು ನಮ್ಮ ದೆಹಲಿ ಸುತ್ತಮುತ್ತ ನ್ಯಾಷನಲ್ ಕ್ಯಾಪಿಟಲ್ ರೀಜನ್(ಎನ್‌ಸಿ‌ಆರ್) ಇದೆ, ಅದೇ ರೀತಿಯಲ್ಲಿ ಇಲ್ಲೂ ನಮ್ಮ ರಾಜ್ಯದಲ್ಲೂ ಕರ್ನಾಟಕ ಕ್ಯಾಪಿಟಲ್ ರೀಜನ್ ಮಾಡಲಿ ಎಂದು ಅರವಿಂದ ಬೆಲ್ಲದ್ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರಿನ ಸುತ್ತಮುತ್ತಲಿನ ನಗರ, ಗ್ರಾಮಗಳನ್ನು ಸೇರಿಸಿ ಎನ್‌ಸಿ‌ಆರ್ ಮಾಡುವುದು ಸೂಕ್ತ ಎಂದು ಹೇಳಿದ ಅವರು, ಇದರಲ್ಲಿ ರಾಮನಗರ, ಕೋಲಾರ. ತುಮಕೂರು, ಬೆಂಗಳೂರಿನ ಭಾಗಗಳನ್ನೂ ಸೇರಿಸಲಿ, ಈ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಿ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

More News