ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೆಲ್ಲ ಸತ್ಯ ಅನ್ಕೋಬೇಡಿ, ಸರ್ಕಾರವನ್ನ ಬೀಳಿಸುವಂತಹ ಯಾವುದೇ ಸಭೆ, ಚರ್ಚೆ ನಮ್ಮನೆಯಲ್ಲಿ ನಡೆದಿರಲಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಬರೋದೂ, ಹೋಗೋದು ಇದ್ದೆ ಇರುತ್ತೆ, ಹಾಗಂತ ಕುಮಾರಸ್ವಾಮಿ ಅವರ ಆರೋಪ ನಿರಾಧಾರ, ಹಾಗೆನೇ ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡೋ ಅಗತ್ಯ ಇಲ್ಲ ಎಂದು ವ್ಯಂಗ್ಯವಾಡಿದರು.
ಹುಲಿ ಉಗುರು ಪ್ರಕರಣಗಳಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೇ, ಯಾವ ಧರ್ಮಕ್ಕೆ ಸೇರಿದರೂ ಕಾನೂನು ಒಂದೇ, ಯಾರೇ ಆದರೂ ಕಾನೂನು ಪ್ರಕಾರ ಕ್ರಮ ತಗೋತೇವೆ ಎಂದು ಅರಣ್ಯ ಸಚಿವರೇ ಹೇಳಿದ್ದಾರೆ ಎಂದು ತಿಳಿಸಿದರು.
ಬಿಟ್ ಕಾಯಿನ್ ತನಿಖೆ ನೆಪದಲ್ಲಿ ಫೋನ್ ಕದ್ದಾಲಿಕೆ ಆರೋಪ
ಬಿಟ್ ಕಾಯಿನ್ ತನಿಖೆ ನೆಪದಲ್ಲಿ ಫೋನ್ ಕದ್ದಾಲಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ನೀವು ಹೇಳಿದ್ದು ಒಳ್ಳೆಯದಾಯಿತು, ನಾವು ಇದನ್ನ ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ ಎಂದರು.

ಬಿಟ್ ಕಾಯಿನ್ ತನಿಖೆ ಮಾಡ್ತಿರುವ ಪ್ರತಿಯೊಬ್ಬ ಆಫೀಸರ್ ಕೂಡ ತುಂಬಾ ಎಚ್ಚರಿಕೆಯಿಂದ ಹಾಕುತ್ತಿದ್ದೇವೆ, ಹಾಗೆಯೇ ಅವರಿಗೆ ಇದನ್ನ ಬಹಳ ಎಚ್ಚರಿಕೆಯಿಂದ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ, ಇದರ ಒಳಗೆ ಯಾರಾದ್ರೂ ಅಧಿಕಾರಿಗಳು ಇನ್ವಾಲ್ ಆಗಿದ್ದರೆ ಅವರನ್ನ ತಂಡದಿಂದ ಕೈ ಬಿಡಲಾಗುವುದು ಎಂದು ತಿಳಿಸಿದರು.
ನಕಲಿ ಆಧಾರ್ ಕಾರ್ಡ್ ಪ್ರಕರಣ
ಹೆಬ್ಬಾಳದಲ್ಲಿ ಇತ್ತೀಚೆಗೆ ದೊರೆತ ನಕಲಿ ಆಧಾರ್ ಕಾರ್ಡ್ ಮತ್ತು ವೋಟರ್ ಕಾರ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹಸಚಿವ, ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿಯವರು ದೂರು ಕೊಡಲಿ, ಆಯೋಗ ಏನು ಆದೇಶ ಮಾಡುತ್ತೋ ನೋಡೋಣ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ ವಿಚಾರವಾಗಿ ಪರಮೇಶ್ವರ್ ಜಾಣ ಉತ್ತರ ನೀಡಿ, ನಮ್ಮನ್ನ ಯಾಕೆ ಆ ವಿವಾದಕ್ಕೆ ಎಳೀತೀರ? ನಾವು ತುಮಕೂರಿನವ್ರು ಶಾಂತಿಯಿಂದ ಇದ್ದೇವೆ, ನಮ್ಮನ್ನು ಬಿಟ್ಬಿಡಿ ಎಂದು ಪರಮೇಶ್ವರ್ ತಿಳಿಸಿದರು.
ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ – ಆಲ್ ದಿ ಬೆಸ್ಟ್
ಸಚಿವ ಸತೀಶ್ ಜಾರಕಿಹೊಳಿ ಬಣದಿಂದ ದುಬೈ ಪ್ರವಾಸದ ಪ್ಲಾನ್ ವಿಚಾರವಾಗಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ದುಬೈಗೆ ಹೋಗಲಿ, ಅವರಿಗೆ ಆಲ್ ದಿ ಬೆಸ್ಟ್ ಹೇಳ್ತೇನೆ, ಎಂಜಾಯ್ ಮಾಡ್ಕೊಂಡು ಬರಲಿ, ಯಾರೋ ನಾಲ್ಕು ಜನ ಶಾಸಕರು ಎಲ್ಲೋ ಟೂರ್ ಹೋದ್ರೆ ಅಷ್ಟಕ್ಕೇ ಏನೇನೋ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಮಜಾಯಿಸಿ ನೀಡಿದರು.
ಅವರ ಖರ್ಚಿನಲ್ಲೇ ಹೋಗ್ತಿರೋದು, ಸರ್ಕಾರ ಅಥವಾ ಪಕ್ಷದ ಖರ್ಚಿನಲ್ಲಿ ಹೋಗುತ್ತಿಲ್ಲ ಎಂದ ಅವರು, ಅಸಮಧಾನಕ್ಕೆ ದುಬೈಗೆ ಹೋಗ್ತಿಲ್ಲ, ದುಬೈಗೆ ಹೋಗ್ತಿರೋದು ಶಾಪಿಂಗ್ ಮಾಡಲು, ಸುತ್ತಾಡಲು ಎಂದರು.




