ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ, ಟೀಮ್ ಇಂಡಿಯಾದ ತಡೆಗೋಡೆ ಎಂದೇ ಖ್ಯಾತಿ ಪಡೆದಿದ್ದ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ.
ನವದೆಹಲಿಯಲ್ಲಿ ಇಂದು ನಡೆದ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸಭೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅದರಂತೆ ಮುಂಬರುವ ನ್ಯೂಜಿಲೆಂಡ್ ವಿರುದ್ದ ಸರಣಿಯೊಂದಿಗೆ ದ್ರಾವಿಡ್, ಟೀಮ್ ಇಂಡಿಯಾ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಟಿ-20 ವಿಶ್ವಕಪ್ ರವಿಶಾಸ್ತ್ರಿ ಅವರ ಕೊನೆಯ ಕೋಚ್ ಆಗಿ ಸೇವೆ ಸಲ್ಲಿಸಿದ ಪಂದ್ಯಾವಳಿಯಾಗಿದೆ.


ರಾಹುಲ್ ದ್ರಾವಿಡ್‌ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ಸಂತೋಷವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್‌ಗಳು ನಡೆಯಲಿವೆ, ಈ ಪಂದ್ಯಾವಳಿಗಾಗಿ ಉತ್ತಮ ತಂಡವನ್ನು ರೂಪಿಸಬೇಕಾಗಿದೆ ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಈ ಉತ್ತಮ ತಂಡದ ನೇತೃತ್ವಕ್ಕೆ ರಾಹುಲ್ ದ್ರಾವಿಡ್ ಸೂಕ್ತ ವ್ಯಕ್ತಿಯಾಗಿದ್ದಾರೆ. ಅವರ ಸಾರಥ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಎಲ್ಲ ಮಾದರಿಗಳಲ್ಲಿ ಪ್ರಾಬಲ್ಯ ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಂಡಳಿಯು ಶೀಘ್ರದಲ್ಲೇ ಇತರ ಕೋಚಿಂಗ್ ಸಿಬ್ಬಂದಿಯ ನೇಮಕಾತಿ ಮಾಡಲಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ರಾಹುಲ್ ಶ್ರೇಷ್ಟ ಆಟಗಾರರಲ್ಲಿ ಒಬ್ಬರು – ಸೌರವ್ ಗಂಗೂಲಿ

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ನೇಮಕವನ್ನು ಸ್ವಾಗತಿಸಲಾಗುವುದು ಎಂದು ತಿಳಿಸಿದ ಅವರು, ರಾಹುಲ್ ಅವರು ಅತ್ಯುತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಗಂಗೂಲಿ ಬಣ್ಣಿಸಿದ್ದಾರೆ.


ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್‌ಗೆ ಅತ್ಯುತ್ತಮವಾದ ಸೇವೆ ಸಲ್ಲಿಸಿದ್ದಾರೆ. ಎನ್‌ಸಿಎಯಲ್ಲಿ ರಾಹುಲ್ ಅವರ ಪ್ರಯತ್ನದಿಂದ ಹಲವಾರು ಯುವ ಪ್ರತಿಭೆಗಳು ಹೊರಹೊಮ್ಮಿವೆ, ಅವರು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರಲ್ಲದೆ, ಅವರ ಹೊಸ ಜವಾಬ್ದಾರಿಯು ಭಾರತೀಯ ಕ್ರಿಕೆಟ್ ಅನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಆಶಾವಾದ ಹೊಂದಿದ್ದೇನೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.
ಈ ಜವಾಬ್ದಾರಿಯನ್ನು ಎದುರು ನೋಡುತ್ತಿದ್ದೆ- ರಾಹುಲ್ ದ್ರಾವಿಡ್

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ನನಗೆ ಸಿಕ್ಕಿರುವ ದೊಡ್ಡ ಗೌರವ ಎಂದು ರಾಹುಲ್ ದ್ರಾವಿಡ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಜವಾಬ್ದಾರಿಗಾಗಿ ಎದುರು ನೋಡುತ್ತಿದ್ದೆ ಎಂದು ತಿಳಿಸಿದ ಅವರು, ರವಿಶಾಸ್ತ್ರಿ ಅವರ ಅಡಿಯಲ್ಲಿ, ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತಂಡವನ್ನು ಇನ್ನೂಮುಂದಕ್ಕೆ ಕೊಂಡೊಯ್ಯಲು ಹಾಗೂ ತಂಡದೊಂದಿಗೆ ಕೆಲಸ ಮಾಡಲು ನಾನು ಉತ್ಸುಹಕನಾಗಿದ್ದೇನೆ, ಎನ್ ಸಿ ಎ ಮತ್ತು ಯು19 ಮತ್ತು ಇಂಡಿಯಾ ಎ ತಂಡಗಳಲ್ಲಿ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದ ದ್ರಾವಿಡ್, ಮುಂದಿನ ಎರಡು ವರ್ಷಗಳಲ್ಲಿ ಬಹು ಪ್ರಮುಖ ಟೂರ್ನಿಗಳಿದ್ದು, ಇದರಲ್ಲಿ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.
ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ದದ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಹೊಸ ಜವಾಬ್ದಾರಿ ಆರಂಭಗೊಳ್ಳಲಿದೆ.

More News