OPERATION KAMALA: ನಾವೂ ಜೀವಂತ ಇದ್ದೀವಿ ಅಂತ ತೋರಿಸಿಕೊಳ್ಳಲು ಆಪರೇಷನ್ ಕಮಲದ ಪ್ರಯತ್ನ ಮಾಡುತ್ತಿರಬಹುದು: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರದಲ್ಲಿಲ್ಲ, ಸೋತಿದ್ದಾರೆ, ರಾಜ್ಯ ಬಿಜೆಪಿಯವರಿಗೆ ಹೈಕಮಾಂಡ್ ನಯಾ ಪೈಸೆ ಬೆಲೆ ಕೊಡುತ್ತಿಲ್ಲ, ಈಗ ಇವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಣ ಕೊಡಿ ಸರ್ಕಾರ ಮಾಡುತ್ತೇವೆ ಅಂತ ಹೈಕಮಾಂಡ್ ಬಳಿ ಕೇಳಿರಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ಜೀವಂತ ಇದೀವಿ ಅಂತ ತೋರಿಸಿಕೊಳ್ಳಲು ಆಪರೇಷನ್ ಪ್ರಯತ್ನ ಮಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಅಧಿಕಾರ ಇಲ್ಲ ಅಂದ್ರೆ ವಾಮ ಮಾರ್ಗದಿಂದ ಬರಲು ಪ್ರಯತ್ನ ಮಾಡುತ್ತಿದ್ದಾರೆ, ಬಿಜೆಪಿಯವರ ದಂಧೆಯೇ ಆಪರೇಷನ್, ಉನ್ನತ ಸ್ಥಾನ, ಹಣದ ಆಮಿಷ ಇಟ್ಟು ಸೆಳೆಯೋದು ಬಿಜೆಪಿಯವರ ತಂತ್ರ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರ
ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಪರಮೇಶ್ವರ್ ಮನೆಯಲ್ಲಿ ನಡೆದ ಚರ್ಚೆ ಬಗ್ಗೆ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇದ್ದಂತಿದೆ, ಆದ್ರೆ ಆವತ್ತು ಚರ್ಚೆ ನಡೆದಿದ್ದು ಹುದ್ದೆ ಬಗ್ಗೆ ಅಲ್ಲ ಮುದ್ದೆ ಬಗ್ಗೆ ಎಂದು ಲೇವಡಿ ಮಾಡಿದರು.
ನಮ್ಮ ನಾಯಕರನ್ನು ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ರು ಅಷ್ಟೇ, ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ, ಊಟದ ನಂತರ ಏನೇನೋ ವ್ಯಾಖ್ಯಾನಗಳು ಆಗುತ್ತಿವೆ, ಆ ವ್ಯಾಖ್ಯಾನಗಳನ್ನು ಪರಮೇಶ್ವರ್ ಆಗಲಿ, ಸಿಎಂ ಆಗಲಿ, ಸತೀಶ್ ಜಾರಕಿಹೊಳಿ ಅವರಾಗಲಿ ಕೊಟ್ಟಿಲ್ಲ ಎಂದರು.


ಆವತ್ತು ಅವರನ್ನ ಊಟಕ್ಕೆ ಕರೆದಿದ್ದಾರೆ, ಇನ್ನೊಂದು ದಿನ ಡಿಕೆಶಿ ಸಾಹೇಬ್ರೀಗೂ ಕರೀತಾರೆ ಎಂದು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, ಡಿಸಿಎಂ ಸಾಹೇಬ್ರು ಬರದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ನಿಗಮ ಮಂಡಳಿ ಪರೀಕ್ಷೆಯಲ್ಲಿ ಕೆಲವರಿಂದ ಬ್ಲೂಟೂತ್ ಬಳಕೆ ವಿಚಾರ
ಯಾದಗಿರಿ, ಕಲ್ಬುರ್ಗಿಯಲ್ಲಿ ಬ್ಲೂ ಟೂತ್ ಬಳಸಿ ಪರೀಕ್ಷೆ ಅಕ್ರಮ ಮಾಡುವ ಪ್ರಯತ್ನ ಮಾಡಿದ್ದಾರೆ. ಗುಲ್ಬರ್ಗ ಗ್ರಾಮೀಣ ಸೆಂಟರ್ ನಲ್ಲಿ ನಾವು ಹೆಚ್ಚಿನ ಕಾಳಜಿವಹಿಸಿ ಕ್ರಮ ಕೈಗೊಂಡಿದ್ವಿ. ಯಾರಿಗೂ ಪರೀಕ್ಷೆಯೊಳಗೆ ಅಕ್ರಮ ನಡೆಸಲು ಆಗಿಲ್ಲ, ಹಾಲ್ ಎಂಟ್ರಿಯಾಗೊದಕ್ಕು ಮೊದಲೇ ತಪಾಸಣೆ ನಡೆಸಿ ವಶಕ್ಕೆ ಪಡೆದಿದ್ದೇವೆ zXOJG.
ಕಲ್ಬುರ್ಗಿ ನಗರದಲ್ಲಿ ಪರೀಕ್ಷೆ ಶುರುವಾದ 45 ನಿಮಿಷದೊಳಗೆ ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ 9 ಮಂದಿ ಬಂಧನ ಆಗಿದ್ದಾರೆ. ಸರ್ಕಾರ ಇಂತಹದನ್ನು ತಡೆಯಲು ಎಲ್ಲ ಕ್ರಮ ಕೈಗೊಂಡಿದೆ. ಮುಂಜಾಗೃತ ಕ್ರಮ ಕೈಗೊಂಡಿದ್ದಕ್ಕೆ ಇಷ್ಟು ಬೇಗ ಬೆಳಕಿಗೆ ಬಂದಿದೆ ಎಂದರು.
ಪ್ರಹ್ಲಾದ್ ಜೋಶಿಗೆ ತಿರುಗೇಟು ನೀಡಿದ ಪ್ರಿಯಾಂಕ್
ಸಿಎಂ-ಡಿಸಿಎಂ ಗುದ್ದಾಟದಲ್ಲಿ ಸರ್ಕಾರ ಬೀಳುತ್ತೆ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜೋಷಿಯವರು ಮೊದಲು ಮೇಲ್ಮನೆ, ಕೆಳಮನೆಗಳಲ್ಲಿ ಪ್ರತಿಪಕ್ಷ ನಾಯಕನನ್ನ ನೇಮಕ ಮಾಡಿಕೊಳ್ಳಲಿ, ಬಿಜೆಪಿಗೆ ಒಳ್ಳೆಯ ರಾಜ್ಯಾಧ್ಯಕ್ಷ ಮಾಡಿ ಎಂದು ತಿರುಗೇಟು ನೀಡಿದರು.
ರೇಣುಕಾಚಾರ್ಯ, ಡಿವಿ ಸದಾನಂದಗೌಡ ಏನೆಲ್ಲ ಮಾತಾಡ್ತಿದ್ದಾರೋ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ, ನಂತರ ನಮ್ಮ ಬಗ್ಗೆ ಜೋಷಿ ಮಾತಾಡಲಿ ಎಂದು ತಾಕೀತು ಮಾಡಿದರು.
ಮಾಜಿ ಮಂತ್ರಿ ಮಕ್ಕಳಿಕೆ ಮತ್ತೆ ಮಂತ್ರಿ ಭಾಗ್ಯ
ಯಾರ್ಯಾರು ಮಂತ್ರಿ ಆಗಿದ್ದಾರೆ ಅಂತ ಪಟ್ಟಿ ತೆಗೆಯಲಿ, ಎಲ್ಲರ ಕೊಡುಗೆಯೂ ಇದೆ, ವಿಪಕ್ಷದಲ್ಲಿದ್ದಾಗ ಅವರವರ ಕೊಡುಗೆ ಇದ್ದೇ ಇರುತ್ತೆ, ಎಲ್ಲರೂ ಅವರವರ ಜವಾಬ್ದಾರಿ ನಿಭಾಯಿಸಿದ್ದಾರೆ, ಆದ್ದರಿಂದ ಎಲ್ಲರಿಗೂ ಅವಕಾಶ ಸಿಗುತ್ತೆ, ನಾವು ಬಸವ ತತ್ವದಲ್ಲಿ ನಂಬಿಕೆ ಇಟ್ಟಿರೋರು, ಎಲ್ಲರ ಶ್ರಮಕ್ಕೆ ಪ್ರತಿಫಲ ಸಿಗುತ್ತೆ, ಕಾಯಬೇಕಾಗುತ್ತದೆ ಎಂದು ಬೇಳೂರು ಗೋಪಾಲಕೃಷ್ಣಗೆ ಪ್ರಿಯಾಂಕ್ ಖರ್ಗೆ ಟಕ್ಕರ್ ನೀಡಿದರು.

More News